ತುಮಕೂರು: ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಒಂದೆರಡು ಬೈ ಎಲೆಕ್ಷನ್ ಗೆಲ್ಲಿಸಿದಾಕ್ಷಣ ದೊಡ್ಡ ಸಂಘಟನಾ ಚುತುರ ಎಂದು ಸರ್ಟಿಫಿಕೇಟ್ ನೀಡೋಕೆ ಆಗಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಟಾಂಗ್ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ಬೈ ಎಲೆಕ್ಷನಗಳು ಯಾವ ಆಧಾರದ ಮೇಲೆ ಗೆಲುವು ಪಡೆಯುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ನಂಜನಗೂಡು, ಗುಂಡ್ಲುಪೇಟೆ ಬೈ ಎಲೆಕ್ಷನ್ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಆರೇ ತಿಂಗಳಿಗೆ ಮತ್ತೆ ಸೋಲಾಯಿತು. ಬಳ್ಳಾರಿ ಲೋಕಸಭಾ ಬೈ ಎಲೆಕ್ಷನ್ 2 ಲಕ್ಷ ಮತಗಳಿಂದ ಗೆದ್ದರೂ, ಸಾವತ್ರಿಕ ಚುನಾವಣೆಯಲ್ಲಿ ಸೋತೆವು. ಬೈ ಎಲೆಕ್ಷನ್‌ನ್ನೇ ಗೆಲುವೇ ಮಾನದಂಡ ಅಲ್ಲ ಎಂದರು.
ವಿಜಯೇಂದ್ರ ಮುಂದೆ ದೊಡ್ಡ ಸವಾಲಿದೆ ಯಡಿಯೂರಪ್ಪ ಅವರಿಗೆ 50 ವರ್ಷದ ಹೋರಾಟ ಇತ್ತು.ಆದರೆ ಇವರಿಗೆ ಯಡಿಯೂರಪ್ಪ ಹೆಸರೇ ಬಲ. ಪಕ್ಷ ಬಲಗೊಳ್ಳದಿದ್ದರೆ ಅಧ್ಯಕ್ಷ ಸ್ಥಾನ ನೀಡಿ ಏನು ಪ್ರಯೋಜನ. ಕಾದು ನೋಡುವ ಎಂದು ಮಾರ್ಮಿಕವಾಗಿ ಉತ್ತರಿಸಿದರು.
ಬಿಜೆಪಿ ಪಕ್ಷದಲ್ಲಿ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಅಧ್ಯಕ್ಷ ಮತ್ತು ವಿರೋಧಪಕ್ಷ ಸ್ಥಾನಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ಯಡಿಯೂರಪ್ಪ ಅವರ ಮಗ ವಿಜಯೇಂದ್ರನನ್ನು ತಂದಿದ್ದಾರೆ. ಇದರ ಬಗ್ಗೆ ಬಿಜೆಪಿ ಪಕ್ಷದ ಮುಖಂಡರಲ್ಲಿಯೇ ತೀವ್ರ ಅಸಮಾಧಾನವಿದೆ ಎಂದರು.
ಮಾಜಿ ಸಚಿವ ವಿ.ಸೋಮಣ್ಣ ಕಾಂಗ್ರೆಸ್ ಸೇರುವ ವಿಚಾರ ಪ್ರಸ್ತಾಪಿಸಿದ ಕೆ.ಎನ್.ರಾಜಣ್ಣ, ಡಿಸೆಂಬರ್ 06 ರಂದು ಸಿದ್ದಗಂಗಾ ಮಠದಲ್ಲಿ ಸೋಮಣ್ಣ ದೊಡ್ಡ ಕಾರ್ಯಕ್ರಮ ಮಾಡುತಿದ್ದಾರೆ. ಅದಕ್ಕೆ ನನ್ನನು ಆಹ್ವಾನಿಸಿದ್ದಾರೆ. ಅಧಿವೇಶನದ ಇದೆ. ಆದರೂ ಬಿಡುವು ಮಾಡಿಕೊಂಡು ಬರಲು ಪ್ರಯತ್ನಿಸುತ್ತೇನೆ. ಕಾಂಗ್ರೆಸ್ ಎನ್ನುವುದು ಒಂದು ಮಹಾಸಾಗರ ಅಲ್ಲಿಗೆ ಗಂಗಾನದಿ ನೀರು ಬರುತ್ತದೆ.ಕಾವೇರಿ ನೀರು ಸೇರುತ್ತದೆ.ಹಾಗೆಯೇ ಕಾಂಗ್ರೆಸ್ ಸಾಮೂಹಿಕ ನಾಯಕತ್ವದ ಪಾರ್ಟಿ.ಕೇಡರ್ ಬೇಸ್ ಪಾರ್ಟಿಯಲ್ಲ ಎಂದರು