ಜಿಲ್ಲೆಯ ಸಮಸ್ಯೆಗಳ ಅರಿವು ಸೋಮಣ್ಣನಿಗೆ ಇಲ್ಲ
ಕಲ್ಪತರು ನಾಡು, ತುಮಕೂರು ಲೋಕಸಭಾ ಚುನಾವಣಾದಲ್ಲಿ ಮೋದಿ ಜಪ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ಹೋದಲ್ಲಿ ಬಂದಲ್ಲಿ ಮೋದಿ ಹೆಸರಲ್ಲಿಯೇ ಮತಯಾಚನೆ ಮಾಡುತ್ತಿರುವ ವಿ.ಸೋಮಣ್ಣ ಅವರಿಗೆ ಜಿಲ್ಲೆಯ ಸಮಸ್ಯೆಗಳ ಅರಿವು ಇಲ್ಲದೇ ಇರುವುದು ಪ್ರಚಾರದಲ್ಲಿ ಎದ್ದು ಕಾಣುತ್ತಿದೆ.
ದೇಶದ ರಕ್ಷಣೆಗೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು, ದೇಶದ ಸಾರ್ವಭೌಮತ್ವ ಕಾಪಾಡಲು ನಡೆಯುತ್ತಿರುವ ದೇಶದ ಚುನಾವಣೆ ಎಂಬುದು ಎಲ್ಲ ಪ್ರಚಾರ ಸಭೆಗಳಲ್ಲಿಯೂ ಕಡ್ಡಾಯವಾಗಿ ಹೇಳುತ್ತಿರುವ ಸೋಮಣ್ಣ ಅವರು ಗೆಲುವಿನ ಗೆರೆ ದಾಟಲು ಮೋದಿ ಬಿಟ್ಟರೆ ಬೇರೆ ಯಾವ ಮಾರ್ಗವೂ ಕಾಣದಂತೆ ಆಗಿದೆ.
ತುಮಕೂರು ರಾಜಕಾರಣದಲ್ಲಿ ಸೌಹಾರ್ದತೆ ಮೂಡಿಸುತ್ತೇನೆ ಎನ್ನುತ್ತಲೇ ಮಾಧುಸ್ವಾಮಿ ವಿರೋಧವನ್ನು ಕಟ್ಟಿಕೊಂಡಿರುವ ವಿ.ಸೋಮಣ್ಣ, ಹಾಲಿ ಸಂಸದ ಜಿ.ಎಸ್.ಬಸವರಾಜು ಮತ್ತು ಪಟಾಲಂನೊಂದಿಗೆ ರಾಜಕೀಯ ತಂತ್ರವನ್ನು ಮುನ್ನೆಡೆಸುತ್ತಿದ್ದಾರೆ.
ಬಿಜೆಪಿಯಿಂದ ದೂರ ಹೋಗುವುದಾಗಿ ಹೇಳಿಕೊಂಡರು ಅಲ್ಲಿಯೇ ಇದ್ದ ಸೊಗಡು ಶಿವಣ್ಣ ಅವರನ್ನು ಪಕ್ಷಕ್ಕೆ ಮತ್ತೆ ಸೇರ್ಪಡೆ ಮಾಡಿಕೊಂಡರು ಸಹ ಪಕ್ಷದ ಪ್ರಚಾರ ಸಭೆಗಳಿಂದ ಅವರನ್ನು ದೂರ ಇಡುವಲ್ಲಿ ಜಿಎಸ್ಬಿ ಮತ್ತು ಪಟಾಲಂ ಮೇಲುಗೈ ಸಾಧಿಸಿದ್ದಾರೆ. ಇದು ಮೂಲ ಬಿಜೆಪಿ ಕಾರ್ಯಕರ್ತರ ಅಸಮಾಧಾನಕ್ಕೂ ಕಾರಣವಾಗಿದೆ.
ಜಿಲ್ಲೆಯ ಬಿಜೆಪಿಯ ಮೂಲ ಕಾರ್ಯಕರ್ತರನ್ನು ಕಡೆಗಣಿಸಿ ವಲಸಿಗರಿಗೆ ಜಿಲ್ಲೆಯಲ್ಲಿ ಮಣೆ ಹಾಕುತ್ತಿರುವ ಬಗ್ಗೆ ಮಾಧುಸ್ವಾಮಿ ಬಹಿರಂಗವಾಗಿ ಧ್ವನಿ ಎತ್ತಿದ್ದರು ಸಹ ಹೈಕಮಾಂಡ್ ಮಾಧುಸ್ವಾಮಿ ಅವರನ್ನು ಕಟ್ಟಿಹಾಕಿದರು, ಮನೆಯಿಂದ ಈಚೆ ಬರಲು ಮನಸ್ಸು ಮಾಡದೇ ಇರುವುದು ಸೋಮಣ್ಣ ಹಿನ್ನಡೆಗೆ ಕಾರಣವಾಗಿದೆ.
ಮೈತ್ರಿ ಸಾಧಿಸುವಲ್ಲಿ ಸುಸ್ತಾದ ಸೋಮಣ್ಣ
ಜಿಲ್ಲೆಯಲ್ಲಿದ್ದ ಬಿಜೆಪಿ-ಕೆಜೆಪಿ ಬಣ ಕಾದಾಟದಲ್ಲಿ ಬಸವಳಿದಿದ್ದ ಕಾರ್ಯಕರ್ತರನ್ನು ಸಮಾನವಾಗಿ ಕೊಂಡೊಯ್ಯುವ ಸವಾಲಿನೊಂದಿಗೆ ಜೆಡಿಎಸ್‌ನ ಸಾಲು ಸಾಲು ನಾಯಕರುಗಳನ್ನು ಸಂಭಾಳಿಸುವುದೇ ಸೋಮಣ್ಣರಿಗೆ ತಲೆನೋವಾಗಿ ಪರಿಣಮಿಸಿದೆ, ಸಿದ್ದರಾಮಯ್ಯ ಟೀಕಿಸುವುದು, ದೇವೇಗೌಡರ ಸೋಲಿಗೆ ಪ್ರತೀಕಾರವನ್ನು ತೀರಿಸುವುದಕ್ಕಷ್ಟೇ ಜೆಡಿಎಸ್ ಸೀಮಿತವಾಗಿ ಪ್ರಚಾರ ಸಭೆಗಳನ್ನು ನಡೆಸುತ್ತಿದೆ.
ಜಿಲ್ಲಾ ಜೆಡಿಎಸ್‌ನ ಪ್ರಭಾವಿ ಮುಖಂಡರಾಗಿದ್ದ ಎಸ್.ಆರ್.ಶ್ರೀನಿವಾಸ್, ಗ್ರಾಮಾಂತರ ಶಾಸಕರಾಗಿದ್ದ ಡಿ.ಸಿ.ಗೌರಿಶಂಕರ್ ಜೆಡಿಎಸ್‌ನಿಂದ ಹೊರಬಂದ್ಮೇಲೆ, ಹಿಡಿತ ತಪ್ಪಿರುವ ಜೆಡಿಎಸ್‌ನ ನಾಯಕತ್ವವನ್ನು ಹೊರುವ ಸಮರ್ಥ ನಾಯಕರ ಕೊರತೆ ಜೆಡಿಎಸ್ ಕಾಡುತ್ತಿದೆ ಇಂತಹ ಸಂದರ್ಭದಲ್ಲಿ ಮೈತ್ರಿಯೊಂದಿಗೆ ಚುನಾವಣೆ ಎದುರಿಸುತ್ತಿರುವುದು ಜೆಡಿಎಸ್ ಮುಖಂಡರಿಗೆ ಗೊಂದಲವನ್ನುಂಟು ಮಾಡಿದ್ದು, ತಳಮಟ್ಟದಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಲು ಪರದಾಡುವಂತಾಗಿದೆ.
ಜಿಎಸ್ಬಿ ಪಟಾಲಂ ಜೊತೆ ಹೆಣಗಾಟ
ಸಂಸದ ಜಿ.ಎಸ್.ಬಸವರಾಜು ರಾಜಕೀಯ ಹೊಂದಾಣಿಕೆಯಿಂದಲೇ ಜಿಲ್ಲೆಯಲ್ಲಿ ಬಿಜೆಪಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಕಡೆಯೂ ಸೋಲುವಂತಾಗಿದ್ದು ಸುಳ್ಳಲ್ಲ, ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಸಚಿವರಾಗಿದ್ದ ಮಾಧುಸ್ವಾಮಿ ವಿರುದ್ಧ ಕೆ.ಎಸ್.ಕಿರಣ್‌ಕುಮಾರ್ ಅವರಿಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ್ದರು. ಇದರಿಂದ ಮಾಧುಸ್ವಾಮಿ ಬೆಂಬಲಿಗರು ಜಿಎಸ್ಬಿ ವಿರುದ್ಧ ಅಸಮಾಧಾನಿತರಾಗಿದ್ದಾರೆ.
ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಬೆಟ್ಟಸ್ವಾಮಿಗೆ ಟಿಕೆಟ್ ತಪ್ಪಿಸಿ ದಿಲೀಪ್ ಕುಮಾರ್‌ಗೆ ಬೆಂಬಲ ನೀಡಿದ್ದರಿಂದ ಗುಬ್ಬಿಯಲ್ಲಿಯೂ ಜಿಎಸ್ಬಿ ವಿರೋಧಿ ಅಲೆ ಇದೆ, ಮಧುಗಿರಿಯಲ್ಲಿ ಬಹಿರಂಗವಾಗಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದು ಮೂಲ ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿದ್ದಲ್ಲದೇ, ಮಧುಗಿರಿ ಪ್ರಚಾರದ ವೇಳೆಯಲ್ಲಿ ಗೋಬ್ಯಾಕ್ ಬಸವರಾಜು ಘೋಷಣೆ ಕೇಳಿಬಂದಿದ್ದರಿಂದಲೇ, ಜಿಎಸ್ಬಿ ಅವರನ್ನು ಲೋಕಸಭಾ ಚುನಾವಣಾ ಪ್ರಚಾರದಿಂದ ದೂರ ಇಡಲು ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ.
ಚುನಾವಣಾ ಅಭ್ಯರ್ಥಿಯಾಗಿ ವಿ.ಸೋಮಣ್ಣ ಅವರು ಘೋಷಣೆಯಾದ ನಂತರ ಎಲ್ಲೆಡೆ ಭಾಷಣ ಮಾಡುತ್ತಿದ್ದ ಜಿ.ಎಸ್.ಬಸವರಾಜು, ಮಾಧುಸ್ವಾಮಿ ವಿರೋಧದ ನಂತರ ಮೌನವಾಗಿದ್ದಾರೆ, ಮಾಧುಸ್ವಾಮಿಯೊಂದಿಗೆ ರಾಜೀಗೆ ಬಂದಿದ್ದ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಜಿಎಸ್ಬಿ ಪಟಾಲಂನ ಹೆಬ್ಬಾಕ ರವಿ ಹೋಗಿದ್ದು ಮಾಧುಸ್ವಾಮಿ ಅಸಮಾಧಾನವನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದೆ ಎನ್ನುವ ಗುಸು ಗುಸು ಕೇಳಿಬರುತ್ತಿದೆ.