ಕಲಾ ಕುಂಚದಿಂದ ಮತದಾನದ ಅರಿವು

ಡೆಸ್ಕ್
1 Min Read

ತುಮಕೂರು: ಸಮಾಜ ಕಲ್ಯಾಣ ಇಲಾಖೆಯಡಿ ನಗರದ ಹನುಮಂತಪುರದಲ್ಲಿ ನಡೆಸಲಾಗುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿನಿಲಯ(ಸರ್ಕಾರಿ ಕಲಾ ಕಾಲೇಜು ಹಾಸ್ಟೆಲ್-1)ದ ವಿದ್ಯಾರ್ಥಿ ಡಿ.ಆರ್. ಹೇಮಂತರಾಜು ತನ್ನ ಕಲಾ ಕುಂಚದಿಂದ ಮತದಾನದ ಜಾಗೃತಿ ಸಾಲುಗಳು ಹಾಗೂ ಅದಕ್ಕೊಪ್ಪುವ ಚಿತ್ರಗಳನ್ನು ಅರಳಿಸುವ ಮೂಲಕ ಮತದಾರರಲ್ಲಿ ಮತದಾನದ ಜಾಗೃತಿ ಮೂಡಿಸುತ್ತಿದ್ದು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್. ಪಾಟೀಲ ಅವರು ಹೇಮಂತನಿಗಿರುವ ಮತದಾನದ ಹಕ್ಕು ಮತ್ತು ಕರ್ತವ್ಯದ ಮೇಲಿರುವ ಜವಾಬ್ದಾರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಮತ್ತು ವಿದ್ಯಾರ್ಥಿನಿಲಯದ ಮೇಲ್ವಿಚಾರಕ ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಹೇಮಂತರಾಜು ಜನರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಜಾನಪದ ಶೈಲಿಯ ವಿವಿಧ ಚಿತ್ತಾರಗಳೊಂದಿಗೆ ಜಾಗೃತಿ ಸಾಲುಗಳನ್ನು ಬರೆದ ಫಲಕಗಳನ್ನು ವಿದ್ಯಾರ್ಥಿನಿಲಯದ ಗೋಡೆಗಳಿಗೆ ಅಳವಡಿಸಿದ್ದಾನೆ.

“ನಿಮ್ಮ ಮತ ಅಮೂಲ್ಯವಾದುದು-ಮೇ 10ರಂದು ಮತದಾನ ಮಾಡಬನ್ನಿ”, “ಯಾವುದೇ ಪ್ರೇರಣೆ-ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸುತ್ತೇವೆಂಬ ಮತದಾರರ ಪ್ರತಿಜ್ಞಾವಿಧಿ”, “ಕರ್ನಾಟಕದ ಜನತೆ-ಪ್ರಜಾಪ್ರಭುತ್ವದ ಹಬ್ಬಕ್ಕೆ ಸಜ್ಜಾಗಿರಿ”, “ಉತ್ತಮ ನಾಳೆಗಾಗಿ ಮತ ಚಲಾಯಿಸಿ”, “ಬಡವ-ಶ್ರೀಮಂತನೆಂಬ ಬೇಧವಿಲ್ಲದೆ ಮತ ಚಲಾಯಿಸಿ”, “ನಿಮ್ಮ ಮತ ಚಿನ್ನಕ್ಕಿಂತ ಅಮೂಲ್ಯ” ಎಂಬ ಸಾಲುಗಳನ್ನು ಫಲಕಗಳಲ್ಲಿ ಬರೆದು ವಿದ್ಯಾರ್ಥಿನಿಲಯದ ಗೋಡೆಗಳ ಮೇಲೆ ತೂಗು ಹಾಕಿದ್ದಾನೆ.

ನಗರದ ರವೀಂದ್ರ ಕಲಾನಿಕೇತನ ಕಾಲೇಜಿನಲ್ಲಿ ಪ್ರಥಮ ಬಿ.ವಿ.ಎ (Bachelor of Visual Arts)ಪದವಿ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿರುವ ಹೇಮಂತರಾಜು ಇದೇ ರೀತಿ ಚಿತ್ರಿಸಿದ ಫಲಕಗಳನ್ನು ಸರ್ಕಾರಿ ಶಾಲೆಗಳಲ್ಲಿಯೂ ತೂಗು ಹಾಕುವ ಇಂಗಿತವನ್ನು ವ್ಯಕ್ತಪಡಿಸಿದ್ದಾನೆ.

ಮತದಾರರಲ್ಲಿ ಅರಿವು ಮೂಡಿಸುವ ಸಲುವಾಗಿ ಸ್ವೀಪ್ ಸಮಿತಿಯು ವಿದ್ಯಾರ್ಥಿಗಳಿಂದ ಇಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ. ಅಲ್ಲದೆ ಪ್ರತೀ ದಿನ ವಿದ್ಯಾರ್ಥಿನಿಲಯಗಳಲ್ಲಿ ವಿನೂತನ ಹಾಗೂ ಸೃಜನಶೀಲತೆಯುಳ್ಳ ಸ್ವೀಪ್ ಚಟುವಟಿಕೆಗಳ ಅಭಿಯಾನವನ್ನು ಪ್ರಾರಂಭಿಸಲಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷೆ ಡಾ. ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.

Share this Article
Verified by MonsterInsights