ತುಮಕೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೊಂಡು ಒಂದು ತಿಂಗಳಾದರೂ ಸರ್ಕಾರದ ಯೋಜನೆಯ ಭಿತ್ತಿಪತ್ರ ತೆರವುಗೊಳಿಸಲು ಅಧಿಕಾರಿಗಳು ನಿರ್ಲಕ್ಷ್ಯವಹಿಸಿರುವ ವಿಚಾರ ಬೆಳಕಿಗೆ ಬಂದಿದೆ.
ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಸರ್ಕಾರ ಯೋಜನೆಗಳು, ಕಾರ್ಯಕ್ರಮಗಳ ಫ್ಲೆಕ್ಸ್, ಭಿತ್ತಿಪತ್ರವನ್ನು ತೆರವುಗೊಳಿಸಲು ಚುನಾವಣಾ ಆಯೋಗ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದರೂ ಸಹ ತುಮಕೂರಿನಲ್ಲಿ ಮಾತ್ರ ಚುನಾವಣಾ ಆಯೋಗದ ನಿರ್ದೇಶನಕ್ಕೆ ಅಧಿಕಾರಿಗಳು ಡೋಂಟ್ ಕೇರ್ ಎನ್ನುತ್ತಿದ್ದಾರೆ.
ನಗರದ ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಬಾಗಿಲಿಗೆ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಸಂವಿಧಾನ ಜಾಗೃತಿ ಅಭಿಯಾನದ ಕುರಿತು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹೊರಡಿಸಿರುವ ಭಿತ್ತಿಪತ್ರ ರಾರಾಜಿಸುತ್ತಿದೆ.
ಸರ್ಕಾರದ ಇತರೆ ಇಲಾಖೆಗಳು ಮತ್ತು ನಿಗಮಗಳು ಸರ್ಕಾರ ಯೋಜನೆಯ ಪ್ರಕಟಣೆಗಳನ್ನು ತೆರವುಗೊಳಿಸಿದರೂ ಸಹ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ಮಾದರಿ ನೀತಿ ಸಂಹಿತೆ, ಚುನಾವಣೆ ಇರುವುದು ಗೊತ್ತು, ಗೊತ್ತಿಲ್ಲದಂತೆ ಇರುವುದು ಸೋಜಿಗದ ಸಂಗತಿಯಾಗಿದೆ.