ತುಮಕೂರು: ಹೆಪಟೈಟಿಸ್ ಬಿ ಮತ್ತು ಟಿಟಿ ಕಾಯಿಲೆ ತಡೆಗಟ್ಟುವ ಸಲುವಾಗಿ ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ವೈದ್ಯಕೀಯ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಮುಂಜಾಗ್ರತೆ ದೃಷ್ಟಿಯಿಂದ ಉಚಿತ ಲಸಿಕೆಯನ್ನು ಹಾಕಲಾಯಿತು.
ಹೆಪಟೈಟಿಸ್ ಎಂದರೆ ಯಕೃತ್ ಅಥವಾ ಪಿತ್ತಜನಕಾಂಗದ ಉರಿಯೂತ ಅಥವಾ ಬಾವು. ಇದು ವೈರಾಣು ಸೋಂಕಿನೊಂದಿಗೆ ಉಂಟಾಗುತ್ತದೆ. ಸೋಂಕು ತಗಲುವುದರಿಂದ ಪಿತ್ತಕೋಶದ ಕಾಯಿಲೆಗೆ ತುತ್ತಾಗಬಹುದು. ಇದರಿಂದ ಯಕೃತ್ ಹಾನಿ, ಯಕೃತ್ ಕ್ಯಾನ್ಸರ್ ಉಂಟಾಗುತ್ತದೆ. ಇದರಿಂದ ಪ್ರಾಣಾಪಾಯ ತಡೆಗಟ್ಟುವ ಸಲುವಾಗಿ ಹೆಪಟೈಟಿಸ್ ಬಿ ಲಸಿಕೆಯನ್ನು ಹಾಕಿಸಲಾಗುತ್ತಿದೆ.
ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ನಿರ್ದೇಶಕರಾದ ಡಾ. ಜಿ ಪರಮೇಶ್ವರ್‌ರವರ ಸೂಚನೆ ಮೇರೆಗೆ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಪ್ರತಿ ತಿಂಗಳು ದಿನಾಂಕ ಐದರಂದು ಉಚಿತ ಲಸಿಕಾ ಶಿಬಿರವನ್ನು ಆಯೋಜಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಕೂಡ ಉಚಿತವಾಗಿ ಲಸಿಕೆಯನ್ನು ನೀಡಲಾಗುವುದು.
ಲಸಿಕಾ ಶಿಬಿರದಲ್ಲಿ ವೈದ್ಯರಾದ ಡಾ.ವರ್ಷ ರಾಘವೇಂದ್ರ, ವೈದ್ಯಕೀಯ ಅಧೀಕ್ಷಕರಾದ ಎಂ.ಎಸ್ ವೇಂಕಟೇಶ್, ವಿಶ್ವನಾಥ ಸೇರಿದಂತೆ ವೈದ್ಯಕೀಯ ಕಾಲೇಜಿನ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿ ಲಸಿಕೆ ಹಾಕಿಸಿಕೊಂಡರು.