ರಾಜಕೀಯ ಅಧಿಕಾರಕ್ಕೆ ಒಗ್ಗಟ್ಟು ಮುಖ್ಯ: ಪಿ.ಆರ್.ರಮೇಶ್

ಡೆಸ್ಕ್
2 Min Read

ತುಮಕೂರು: ತಿಗಳ ಸಮುದಾಯ ರಾಜಕೀಯ ಅಧಿಕಾರ ಪಡೆಯಬೇಕಾದರೆ ಒಗ್ಗಟ್ಟು ಮುಖ್ಯ, ತಿಗಳ ಸಮುದಾಯದ ಶಕ್ತಿ ಪ್ರದರ್ಶನಕ್ಕಾಗಿ ಬೆಂಗಳೂರಿನಲ್ಲಿ ಮಾ.14ರಂದು ನಡೆಯುವ ಕಾಂಗ್ರೆಸ್ ಪಕ್ಷದ ತಿಗಳ ಜನಾಂಗದ ಬೃಹತ್ ಸಮಾವೇಶ ವನ್ನು ಯಶಸ್ವಿಗೊಳಿಸುವಂತೆ ವಿಧಾನಪರಿಷತ್ ಮಾಜಿ ಸದಸ್ಯ ಪಿ.ಆರ್.ರಮೇಶ್ ಕರೆ ನೀಡಿದರು.

ನಗರ ಹೊರಪೇಟೆಯ ಶ್ರೀವಾಲ್ಮೀಕಿ ಕನ್ವೆಷನ್ ಹಾಲ್ನಲ್ಲಿ ನಡೆದ ತುಮಕೂರು ಜಿಲ್ಲಾ ತಿಗಳ ಸಮಾಜದ ಕಾಂಗ್ರೆಸ್ ಹಾಗೂ ಹಿರಿಯ ಮುಖಂಡರುಗಳ ಸಭೆಯಲ್ಲಿ  ಅವರು ಮಾತನಾಡಿದರು.

ಚುನಾವಣಾ ಸಮಯದಲ್ಲಿ ಎಲ್ಲಾ ಸಮುದಾಯಗಳು ಅವರ ಶಕ್ತಾನುಸಾರ ಸೀಟುಗಳನ್ನು ಕೇಳುತ್ತಿದ್ದಾರೆ.ರಾಜ್ಯದ 14 ಜಿಲ್ಲೆಗಳ, 80 ವಿಧಾನಸಭಾ ಕ್ಷೇತ್ರಗಳಲ್ಲಿ 5 ಸಾವಿರದಿಂದ 25 ಸಾವಿರ ಮತದಾರರನ್ನು ಹೊಂದಿದ್ದಾರೆ.ನಮ್ಮದೆ ಸಮುದಾಯದ ಮುದ್ದುರಾಮಯ್ಯ 3 ಬಾರಿ ಶಾಸಕರಾಗಿದ್ದವರು. ನರೇಂದ್ರಬಾಬು ಎರಡು ಬಾರಿ ಶಾಸಕರಿದ್ದರು. ಆ ನಂತರದಲ್ಲಿ ಯಾರು ಶಾಸಕರಾಗಿಲ್ಲ.ಹಾಗಾಗಿ ರಾಜಕೀಯ ಅಧಿಕಾರ ಪಡೆಯಲು ಒಗ್ಗಟ್ಟು ಮುಖ್ಯ ಎಂದರು.

ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ತಿಗಳ ಸಮುದಾಯದ ಮತದಾರರಿದ್ದಾರೆ.ಮುಂದಿನ ಚುನಾವಣೆಯಲ್ಲಿ ನಾವೆಲ್ಲರೂ ಕಾಂಗ್ರೆಸ್ ಪಕ್ಷದ ಪರವಾಗಿ ನಮ್ಮ ನಿಷ್ಠೆ ಮೆರೆಯಬೇಕಿದೆ.ಆ ಮೂಲಕ ಜಿಲ್ಲೆಯ ನಾಯಕರು ರಾಜಕೀಯ ಅಧಿಕಾರವನ್ನು ಪಡೆಯಲು ಮುಂದಾಗಬೇಕು.ಚುನಾವಣೆಗೆ ಮುನ್ನವೇ ತಮ್ಮ ಬೇಡಿಕೆಗಳನ್ನು ಪಕ್ಷದ ಮುಂದಿಟ್ಟು, ಅಧಿಕಾರಕ್ಕೆ ಬಂದ ನಂತರ ಅದನ್ನು ಈಡೇರಿಸುವಂತೆ ಒತ್ತಡ ಹಾಕಬಹುದಾಗಿದೆ.ಯುವಕರಿಗೆ ಮಾಹಿತಿ ಕೊರತೆ ಮತ್ತು ಸುಳ್ಳು ಭರವಸೆಗಳಿಗೆ ಮಾರು ಹೋಗಿ ಕಾಂಗ್ರೆಸ್ನಿಂದ ಆಚೆ ಇದ್ದು,ಯುವಕರ ಮನವೊಲಿಸಿ ಕಾಂಗ್ರೆಸ್ ಪಕ್ಷದತ್ತ ಕರೆ ತರಬೇಕಿದೆ.ರಾಜಕೀಯ ದೊಂಬರಾಟವನ್ನು ತಪ್ಪಿಸಲು ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಬರುವಂತೆ ಮಾಡಬೇಕಿದೆ ಎಂದು ಪಿ.ಆರ್.ರಮೇಶ್ ನುಡಿದರು.

ತಿಗಳ ಮಹಾಸಭಾ ರಾಜ್ಯಾಧ್ಯಕ್ಷ ಎಸ್.ಸುಬ್ಬಣ್ಣ ಮಾತನಾಡಿ, ನಗರದ ಗಾಜಿನಮನೆಯಲ್ಲಿ ನಡೆದ ತಿಗಳರ ಸಮಾವೇಶದಲ್ಲಿ ಮುಖ್ಯಮಂತ್ರಿಗಳು ನೀಡಿದ್ದ ಭರವಸೆಯಂತೆ ತಿಗಳ ಅಭಿವೃದ್ದಿ ನಿಗಮ, ಅಗ್ನಿಬನ್ನಿರಾಯಸ್ವಾಮಿ,ಧ್ರೌಪದಿ ತಾಯಿಯ ಜಯಂಯೋತ್ಸವ,15 ಕೋಟಿ ಅನುದಾನ ಯಾವುದನ್ನು ಈಡೇರಿಸಿಲ್ಲ.ಬಸವರಾಜು ಬೊಮ್ಮಾಯಿ ಒಂದು ರೂ ಅನುದಾನ ನೀಡಿಲ್ಲ.ಆದರೆ ಸಿದ್ದರಾಮಯ್ಯ ಬಜೆಟ್ ಮಂಡಿಸುವ ನಾವು ನೀಡಿದ್ದ ಬೇಡಿಕೆಯಂತೆ ಸಮುದಾಯಗಳ ಭವನಗಳಿಗೆ ಅನುದಾನ ನೀಡಿದ್ದಾರೆ.ಕೊಳಗೇರಿ ಅಭಿವೃದ್ದಿ ನಿಗಮದ ಅಧ್ಯಕ್ಷರಾಗಿ ಪಿ.ಆರ್.ರಮೇಶ್,ಕೃಷಿ ಮಾರುಕಟ್ಟೆ ಸಮಿತಿಗೆ ರೇವಣ್ಣಸಿದ್ದಯ್ಯ ಅವರನ್ನು ನೇಮಕ ಮಾಡಿದರು. ಕಾಂಗ್ರೆಸ್ ಪಕ್ಷ ನಮ್ಮ ಪರವಾಗಿ ಕೆಲಸಮಾಡಿದೆ. ಹಾಗಾಗಿ ಈ ಬಾರಿ ನಾವುಗಳು ಕಾಂಗ್ರೆಸ್ ಪಕ್ಷದ ಬಲಪಡಿಸಬೇಕಿದೆ.ತುಮಕೂರು ಜಿಲ್ಲೆಯಲ್ಲಿ ತಿಗಳ ಸಮುದಾಯದ 2.50 ಲಕ್ಷ ಮತದಾರರಿದ್ದೇವೆ.ಎಲ್ಲರೂ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡೋಣ ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಭೀಮಸಂದ್ರ ಕೃಷ್ಣಪ್ಪ ಮಾತನಾಡಿ, ಕೃಷಿಯನ್ನೇ ನಂಬಿ ಬದುಕುತ್ತಿರುವ ಸಮುದಾಯ ನಮ್ಮದು, ಶೈಕ್ಷಣಿಕವಾಗಿ ನಾವು ಇನ್ನೂ ಹಿಂದುಳಿದಿದ್ದೇವೆ. ರಾಜಕೀಯವಾಗಿಯೂ ಸಾಕಷ್ಟು ಹಿಂದುಳಿದಿದ್ದೇವೆ. ಕೇವಲ ಉಪಮೇಯರ್, ಜಿ.ಪಂ.ಉಪಾಧ್ಯಕ್ಷ,ತಾ.ಪಂ.ಸದಸ್ಯ,ಗ್ರಾಮಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕಷ್ಟೇ ಸಿಮೀತವಾಗಿದೆ.ಎಂ.ಎಲ್.ಸಿ. ಟಿಕೇಟ್ ಪಡೆಯಲು ಬೇಡಬೇಕಾಗಿದೆ.ಕಾಂಗ್ರೆಸ್ ಮಾತ್ರ ನಮ್ಮವರನ್ನು ಗುರುತಿಸಿ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದ್ದಾರೆ.ಕಾಂಗ್ರೆಸ್ನ್ನು ಬೆಂಬಲಿಸುವ ಮೂಲಕ ನಾವು ಕೂಡ ರಾಜಕೀಯವಾಗಿ ಬೆಳೆಯಬೇಕು.ಈ ಬಾರಿ ತುಮಕೂರು ನಗರ ವಿಧಾನಸಭಾ ಕ್ಷೇತ್ರದಿಂದ ನಮ್ಮ ಸಮುದಾಯದ ಸುಬ್ಬಣ್ಣ ಅವರಿಗೆ ಟಿಕೇಟ್ ನೀಡಬೇಕೆಂದು ಒತ್ತಾಯಿಸಿದರು.

ಸಭೆಯಲ್ಲಿ ಮುಖಂಡರಾದ ರೇವಣ್ಣಸಿದ್ದಯ್ಯ, ಎಲ್.ಮಂಜುನಾಥ್, ಜೆ.ಕೃಷ್ಣಪ್ಪ, ಜಗದೀಶ್, ಜಿ.ಪಂ.ಮಾಜಿ ಸದಸ್ಯ ಕೃಷ್ಣಪ್ಪ, ಗ್ರಾ.ಪಂ.ಅಧ್ಯಕ್ಷ ಮಲ್ಲಿಕಾರ್ಜುನ ಕೆಸರುಮಡು , ಶಿವಣ್ಣ, ಗುಬ್ಬಿ ಲೋಕೇಶ್,ರ‍್ಜುನ್,ಶ್ರೀನಿವಾಸ್,ಶಿವಣ್ಣ, ಹೆಗ್ಗೆರೆ ಮೂರ್ತಿ ಮತ್ತಿತರರು ಭಾಗವಹಿಸಿದ್ದರು.

Share this Article
Verified by MonsterInsights