ತುಮಕೂರು: ಅಮಲು ಬರಿಸುವ ಮಾತ್ರೆಗಳನ್ನು ಮಾರುತ್ತಿದ್ದ ಇಬ್ಬರು ಡ್ರಗ್ಸ್ ದಂಧೆಕೋರರನ್ನು ಬಲೆಗೆ ಕೆಡವುವಲ್ಲಿ ತಿಲಕ್ ಪಾರ್ಕ್ ಪೊಲಿಸರು ಯಶಸ್ವಿಯಾಗಿದ್ದಾರೆ.
ಬಂಧಿತ ಡ್ರಗ್ಸ್ ದಂಧೆಕೋರರಿಂದ ಸುಮಾರು 56 ಸಾವಿರ ಬೆಲೆಬಾಳುವ 1700 ಮಾತ್ರೆಗಳ ವಶ ಪಡೆಯಲಾಗಿದ್ದು, ದಂಧೆಯಲ್ಲಿ ಭಾಗಿಯಾಗಿರುವವರ ಪತ್ತೆ ಬಲೆ ಬೀಸಿದ್ದಾರೆ.
ಅಕ್ಟೋಬರ್ 15ರಂದು ನಶೆಯಲ್ಲಿ ತೇಲುತ್ತಿರುವ ತುಮಕೂರು ಶೀರ್ಷಿಕೆಯಡಿ ಸವಿಸ್ತಾರವಾದ ವರದಿಯನ್ನು ಪ್ರಕಟಿಸಿತ್ತು, ತುಮಕೂರು ನಗರದ ವಿವಿಧ ಬಡಾವಣೆಗಳಲ್ಲಿ ಅಕ್ರಮವಾಗಿ ಅಮಲು ಬರಿಸುವ ಮಾತ್ರೆಗಳನ್ನು ಯುವ ಜನರಿಗೆ ವಿದ್ಯಾರ್ಥಿಗಳಿಗೆ ಯಾರೋ ಕೆಲವು ವ್ಯಕ್ತಿಗಳು ಕದ್ದು ಮುಚ್ಚಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುತ್ತಾರೆಂದು ಖಚಿತ ಮಾಹಿತಿಯನ್ನು ವರದಿ ಮಾಡಿತ್ತು.
ಪತ್ರಿಕೆಯಲ್ಲಿ ವರದಿ ಪ್ರಕಟವಾದ ಬೆನ್ನಲ್ಲೆ ಡ್ರಗ್ಸ್ ದಂಧೆಕೋರರನ್ನು ಖೆಡ್ಡಾಗೆ ಕೆಡವಲು ಸಜ್ಜಾಗಿದ್ದ ತುಮಕೂರು ಪೊಲೀಸರು ಅಕ್ಟೋಬರ್ 31 ರಂದು ಡ್ರಗ್ಸ್ ದಂದೆಕೋರರುಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ಸದಾಶಿವನಗರ ಬಡಾವಣೆಯ ರಸ್ತೆಯಲ್ಲಿ ಡ್ರಗ್ಸ್ ಮಾರಾಟದ ದಂಧೆಯಲ್ಲಿ ತೊಡಗಿದ್ದ ಅಬ್ದುಲ್ ಖಾದರ್, ಬೀರೇಶ ಎಂಬುವರನ್ನು ಬಂಧಿಸಿದ್ದಾರೆ.
ಬಂಧಿತರಿಂದ 56 ಸಾವಿರ ರೂ ಬೆಲೆಬಾಳುವ ಅಮಲು ಬರಿಸುವ 1700 ಮಾತ್ರೆಗಳನ್ನು ಮತ್ತು ಒಂದು ಹೋಂಡಾ ಆಕ್ಟಿವಾ ಸ್ಕೂಟರನ್ನು ವಶಪಡಿಸಿಕೊಂಡಿರುತ್ತಾರೆ. ಹಾಗೂ ಈ ಅಕ್ರಮ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವ ಇತರೆ ವ್ಯಕ್ತಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದು, ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣವು ದಾಖಲಾಗಿದೆ.
ತಿಲಕ್ ಪಾರ್ಕ್ ವೃತ್ತದ ಇನ್ಸ್‌ಪೆಕ್ಟರ್ ಪುರುಷೋತ್ತಮ ಜಿ., ಪಿ.ಎಸ್.ಐ. ಟಿ.ಎಸ್. ಚಂದ್ರಕಲಾ , ತಿಲಕ್ ಪಾರ್ಕ್ ವೃತ್ತದ ಪೊಲೀಸ್ ಠಾಣೆ ಸಿಬ್ಬಂದಿಗಳಾದ ಮಂಜುನಾಥ, ಲೋಕೇಶ್ ಬಾಬು, ಎಂ.ಎಸ್.ಅಬೀದ್, ಸಿದ್ದೇಶ್ವರ ಎಸ್. ಹಾಗೂ ಪೊಲೀಸ್ ಪೇದೆಗಳಾದ ಜಗದೀಶಯ್ಯ, ನಿಜಾಮುದ್ದೀನ್. ಲೋಕೇಶ್, ನಾಸೀರ್ ಉದ್ದೀನ್, ಪ್ರವೀಣ್ ಕುಮಾರ್, ನವೀನ್ ಕುಮಾರ್, ರಾಮಕೃಷ್ಣ, ಪ್ರಕಾಶ್, ಶಶಿಕುಮಾರನಾಯ್ಕ ಹಾಗೂ SOCO ತಂಡದ ಕುಮಾರಿ ವಾಣಿ ಅವರನ್ನು ಎಸ್ಪಿ ಅಶೋಕ್.ಕೆ.ವಿ. ಶ್ಲಾಘಿಸಿರುತ್ತಾರೆ.
ಯುವ ಪೀಳಿಗೆಯವರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅಡ್ಡದಾರಿ ಹಿಡಿದು ಹಾಳಾಗುತ್ತಿರುತ್ತಾರೆ ಹಾಗೂ ಇದರಿಂದ ಸಮಾಜದ ನೆಮ್ಮದಿ ಸ್ವಾಸ್ಥ ಹಾಳಾಗುತ್ತಿರುತ್ತದೆ. ಪಾಶ್ಚಿಮಾತ್ಯ ಜೀವನ ಶೈಲಿಯ ಬೆನ್ನತ್ತಿ ಕೆಲ ಅಡ್ಡದಾರಿಗಳನ್ನು ತುಳಿದು ಮಾದಕ ವ್ಯಸನಗಳಂತಹ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಸಾರ್ವಜನಿಕರು ಈ ತರಹದ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದವರ ಬಗ್ಗೆ ಪೊಲೀಸ್ ಸಹಾಯವಾಣಿ 112 (ERSS) ಗೆ ಮಾಹಿತಿ ತಿಳಿಸಲು ಎಸ್ಪಿ ಅಶೋಕ್ ಕೋರಿದ್ದಾರೆ.