ತುಮುಲ್ ನೇಮಕಾತಿ ಅಕ್ರಮ: ಲೋಕಾಯುಕ್ತ ನೋಟೀಸ್ ಜಾರಿ

ಡೆಸ್ಕ್
1 Min Read

ತುಮಕೂರು: ತುಮಕೂರು ಹಾಲು ಉತ್ಪಾದಕರ ಒಕ್ಕೂಟದ ನೇಮಕಾತಿಯಲ್ಲಿ ನಡೆದಿದ್ದ ಅಕ್ರಮ ಸಂಬಂಧ ದಾಖಲಾಗಿದ್ದ ದೂರಿಗೆ ಲೋಕಾಯುಕ್ತ ನೋಟೀಸ್ ಜಾರಿ ಮಾಡಿದೆ.

ಜುಲೈ 09,2023ರಂದು ನಡೆದಿದ್ದ ತುಮುಲ್ ನೇಮಕಾತಿ ಪರೀಕ್ಷೆಯಲ್ಲಿ ಹಣಪಡೆದು ಸುಮಾರು 120 ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆಯ ಲಿಂಕ್‍ ನೀಡಿದ್ದ ಬಗ್ಗೆ, ನೇಮಕಾತಿ ಪ್ರಕ್ರಿಯೆಯಲ್ಲಿ ಆಗಿರುವ ಅಕ್ರಮಗಳ ಬಗ್ಗೆ “ಪ್ರಜಾಕಹಳೆ” ನಿರಂತರ ತನಿಖಾ ವರದಿಗಳನ್ನು ಪ್ರಕಟಿಸಿತ್ತು.

ತುಮುಲ್ ಆಡಳಿತ ಮಂಡಳಿಯ ಹಿಂದಿನ ಅಧ್ಯಕ್ಷರಾಗಿದ್ದ ಸಿ.ವಿ.ಮಹಾಲಿಂಗಯ್ಯ, ತುಮುಲ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಸುರೇಶ್, ಹಾಲಿ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್, ರಾಯಚೂರು ವಿವಿಯ ಕುಲಪತಿ ಹರೀಶ್ ರಾಮಸ್ವಾಮಿ, ರಿಜಿಸ್ಟಾರ್ ವಿಶ್ವನಾಥ್ ಅವರು ಪರೀಕ್ಷಾ ಅಕ್ರಮಕ್ಕೆ ಕಾರಣವಾಗಿರುವ ಬಗ್ಗೆ “ಪ್ರಜಾಕಹಳೆ” ಲೋಕಾಯುಕ್ತಕ್ಕೆ ದೂರು ನೀಡಿತ್ತು.

ಪ್ರಕರಣವನ್ನು ದಾಖಲಿಸಿಕೊಂಡಿದ್ದ ಲೋಕಾಯುಕ್ತ ನೋಟೀಸ್ ಜಾರಿ ಮಾಡಿದ್ದು, ಪ್ರಕರಣ ಸಂಬಂಧ ಸ್ಪಷ್ಟೀಕರಣ ನೀಡುವಂತೆ ಸೂಚಿಸಿದೆ. ತುಮುಲ್ ನ ಹಿಂದಿನ ಆಡಳಿತ ಮಂಡಳಿ ನಡೆಸಿದ್ದ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ, ನೇಮಕಾತಿ ಅಕ್ರಮಗಳ ಬಗ್ಗೆ ಹೈಕೋರ್ಟ್ ನಲ್ಲಿ ಸುಮಾರು 5ಕ್ಕೂ ಹೆಚ್ಚು ದೂರುಗಳು ದಾಖಲಾಗಿದ್ದು, ಅದರೊಂದಿಗೆ ಲೋಕಾಯುಕ್ತ ವಿಚಾರಣೆ ಕೈಗೆತ್ತಿಕೊಂಡಿದ್ದು, ಹಿಂದಿನ ಆಡಳಿತ ಮಂಡಳಿಯ ಅಕ್ರಮಗಳು ಬಯಲಿಗೆ ಬರಲು ಕಾಲ ಕೂಡಿಬಂದಂತಾಗಿದೆ.

Share this Article
Verified by MonsterInsights