ತುಮಕೂರು: ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಜಾತ್ಯತೀತ ಜನತಾದಳ ಪರಿಶಿಷ್ಟ ಜಾತಿ ವಿಭಾಗದ ವತಿಯಿಂದ 2ನೇ ಸುತ್ತಿನ ಪ್ರಚಾರಾಂದೋಲನ ಕಾರ್ಯಕ್ರಮಕ್ಕೆ ಶಾಸಕ ಡಿ.ಸಿ.ಗೌರಶಂಕರ್ ತಮ್ಮ ಬಳ್ಳಗೆರೆ ನಿವಾಸದಲ್ಲಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಶಾಸಕ ಗೌರಿಶಂಕರ್, ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ನನ್ನ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ, ಕ್ಷೇತ್ರವನ್ನು ಮಾದರಿ ಮಾಡುವ ನಿಟ್ಟಿನಲ್ಲಿ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಮಾಡಲಾಗಿದೆ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನತಾದಳ ಪರಿಶಿಷ್ಟ ಜಾತಿ ವಿಭಾಗದ ವತಿಯಿಂದ ಪ್ರಚಾರಾಂದೋಲನ ಕಾರ್ಯಕ್ರಮ ಹಮ್ಮಿಕೊಂಡು ಜನರಿಗೆ ತಿಳಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಕ್ಷೇತ್ರದಲ್ಲಿ ಉತ್ತಮ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಶಾಲೆಗಳ ಅಭಿವೃದ್ಧಿ, ದೇಗುಲಗಳ ಜೀರ್ಣೋದ್ಧಾರ ಕಾರ್ಯ ಮಾಡಲಾಗಿದೆ, ಅಲ್ಲದೆ ಕೊರೊನಾ ಸಂದರ್ಭದಲ್ಲಿ ಕ್ಷೇತ್ರದ ಜನರ ಮನೆ ಬಾಗಿಲಿಗೆ ಆಹಾರ ಕಿಟ್ ತಲುಪಿಸಲಾಯಿತು, ಅಲ್ಲದೆ ಕೊರೊನಾ ಕೇರ್ ಸೆಂಟರ್ ತೆರೆದು ಜನರ ಆರೋಗ್ಯ ಕಾಪಾಡುವ ಕಾರ್ಯ ಮಾಡಿದೆ, ಕ್ಷೇತ್ರದ ಜನರ ಸೇವೆ ಮಾಡುವುದೇ ನನ್ನ ಮುಖ್ಯ ಉದ್ದೇಶ ಎಂದರು.
ಗ್ರಾಮಾಂತರ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಮಾಡಿ ಮಾದರಿ ಕ್ಷೇತ್ರ ಮಾಡುವುದು ನನ್ನ ಮುಖ್ಯ ಗುರಿ, ಮುಂದಿನ ಚುನಾವಣೆಯಲ್ಲಿ ಕ್ಷೇತ್ರದ ಜನರು ನನ್ನನ್ನು ಆಶೀರ್ವದಿಸಿ ಮತ್ತೆ ಶಾಸಕನನ್ನಾಗಿ ಮಾಡುವ ಆಶಾಭಾವನೆ ಇದೆ ಎಂದು ಹೇಳಿದರು.
ಜನತಾದಳ ಪರಿಶಿಷ್ಟ ಜಾತಿ ವಿಭಾಗದ ತಾಲ್ಲೂಕು ಅಧ್ಯಕ್ಷ ಬೆಳಗುಂಬ ವೆಂಕಟೇಶ್ ಮಾತನಾಡಿ, ಶಾಸಕ ಗೌರಿ ಶಂಕರ್ ಅವರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದು, ಆ ಕಾರ್ಯಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ 2ನೇ ಹಂತದಲ್ಲಿ ಪ್ರಚಾರಾಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಶಾಸಕರು ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಮುಂದಿನ ಚುನಾವಣೆಯಲ್ಲಿ ಅವರಿಗೆ ಶ್ರೀರಕ್ಷೆಯಾಗಲಿದೆ, ಗ್ರಾಮಾಂತರ ಕ್ಷೇತ್ರದ ಮನೆ ಮಗನಂತೆ ಕೆಲಸ ಮಾಡುತ್ತಿರುವ ಶಾಸಕ ಗೌರಿಶಂಕರ್ ಮತ್ತೆ ಶಾಸಕರಾಗಿ ಆಯ್ಕೆಯಾಗುವುದರಲ್ಲಿ ಅನುಮಾನ ಇಲ್ಲ ಎಂದರು.
ಮುಖಂಡರಾದ ಸಾಸಲು ಮೂರ್ತಿ, ಹರಳೂರು ಪ್ರಕಾಶ್, ಜಿ.ರಾಜಣ್ಣ, ಜನಾರ್ಧನ್, ಕೇಶವಣ್ಣ, ಹನುಮಂತಣ್ಣ ಪಂಡಿತನಹಳ್ಳಿ, ಕರೆಕಲ್ ಪಾಳ್ಯ ಶಿವರಾಜ್, ಅಂಜಿನಪ್ಪ ,ಹೆಬ್ಬಾಕ ಕುಮಾರ್, ಹೆಬ್ಬೂರು ಮಲ್ಲೇಶ್, ಗಿರೀಶ್, ಧೂಳ್ ಮಂಜು, ಜಗದೀಶ್, ಹೊಕ್ಕೋಡಿ ಚಂದ್ರು, ಬುಗುಡಹಳ್ಳಿ ನಾಗರಾಜ್, ದೊಡ್ಡೇರಿ, ಡಿ.ಕೆ.ಕಾಂತರಾಜು, ರಾಜಣ್ಣ, ನಂದಿಹಳ್ಳಿ ನಾಗರಾಜ್, ತಿಮ್ಮನಾಯಕಹಳ್ಳಿ ವೆಂಕಟೇಶ್ ಇತರರು ಇದ್ದರು.