ತುಮಕೂರು: ಗ್ರಾಮಾಂತರ ಶಾಸಕ ಬಿ.ಸುರೇಶ್ ಗೌಡ ಅವರು ನನ್ನನ್ನು ಕೊಲೆ ಮಾಡಲು ಸಂಚು ರೂಪಿಸಿರಬಹುದು ಎಂದು ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಗಂಭೀರ ಆರೋಪ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರೇಶ್ ಗೌಡರು ಪತ್ರಿಕಾಗೋಷ್ಠಿಯಲ್ಲಿ ನನ್ನ ವಿರುದ್ಧ ಕಾನೂನು ಹೋರಾಟ, ಮಾನನಷ್ಟ ಮೊಕದ್ದಮೆಯೊಂದಿಗೆ ಇನ್ನೊಂದು ಮಾಡುತ್ತೇನೆ ಎಂದಿದ್ದಾರೆ. ಇನ್ನೊಂದು ಅಂದರೆ ಏನು ಕೊಲೆ ಮಾಡಿಸುತ್ತೀರಾ? ಕೊಲೆ ಮಾಡಲು ಸ್ಕೆಚ್ ಹಾಕಿದ್ದಾರೆಯೇ ಎಂಬ ಆತಂಕ ಶುರುವಾಗಿದೆ ಎಂದರು.
ಹಾಲಿ ಶಾಸಕರು ನೀಡಿರುವ ಹೇಳಿಕೆಯ ಬಗ್ಗೆ ತನಿಖೆ ನಡೆಸುವಂತೆ ಗೃಹ ಸಚಿವರಿಗೆ ದೂರು ನೀಡಲಿದ್ದು, ನನಗೆ ಏನಾದರೂ ಆದರೆ ಅದಕ್ಕೆ ಸುರೇಶ್ ಗೌಡರೇ ಕಾರಣ. ಸುರೇಶ್ ಗೌಡರು ಹೇಳಿರುವ ಇನ್ನೊಂದು ಏನು ಎಂಬುದರ ಬಗ್ಗೆ ಪೊಲೀಸ್ ತನಿಖೆ ನಡೆಸುವಂತೆ ಮನವಿ ಸಲ್ಲಿಸುತ್ತೇನೆ ಎಂದರು.