ತುಮಕೂರು: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ತೇಜೋವಧೆ ಆಗುವಂತೆ ಮಾತನಾಡಿರುವ ಹಾಲಿ ಶಾಸಕ ಸುರೇಶ್ ಗೌಡ ತಮ್ಮ ಮಾತನ್ನು ವಾಪಾಸ್ ಪಡೆಯಬೇಕು, ಕ್ಷೇತ್ರದ ಜನರ ಕ್ಷಮೆಯಾಚಿಸಬೇಕು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈ.ಕೆ.ರಾಮಯ್ಯ ಅವರಂತಹ ಸಜ್ಜನ ರಾಜಕಾರಣಿ ಪ್ರತಿನಿಧಿಸುತ್ತಿದ್ದ ಕ್ಷೇತ್ರಕ್ಕೆ ಘನತೆ ಇದೆ. ಜನರ ವಿಶ್ವಾಸ ಹೊಂದಿರುವರು ಗೆಲ್ಲುತ್ತಾರೆ. ಕ್ಷೇತ್ರದ ಘನತೆ ಹಾಳು ಮಾಡದಂತೆ ಕಾರ್ಯನಿರ್ವಹಿಸಬೇಕು. ಮಾಜಿ ಮತ್ತು ಹಾಲಿ ಶಾಸಕರು ಪದಬಳಕೆಯ ಮೇಲೆ ಹಿಡಿತ ಇಟ್ಟುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಗ್ರಾಮಾಂತರ ಕ್ಷೇತ್ರದಲ್ಲಿ ಪಕ್ಷ ಸೇರಿದಂತೆ ಯಾವುದೇ ಕಾರಣಕ್ಕೂ ಇದುವರೆಗೆ ಒಂದು ಗಲಭೆಯಾಗಿಲ್ಲ, ಇಂತಹ ಸುಸಂಸ್ಕೃತ ಕ್ಷೇತ್ರದಿಂದ ಜನಪ್ರತಿನಿಧಿಯಾಗಿರುವವರು ಕ್ಷೇತ್ರದ ಮರ್ಯಾದೆ ತೆಗೆಯುವ ಕೆಲಸ ಮಾಡಬಾರದು ಎಂದು ಸುರೇಶ್ ಗೌಡರಿಗೆ ಎಚ್ಚರಿಕೆ ನೀಡಿದರು.
ಎಲ್ಲರೂ ಹೊಂದಾಣಿಕೆ ರಾಜಕಾರಣಿಗಳೇ, ಹೊಂದಾಣಿಕೆ ಮಾಡಿಕೊಳ್ಳದ ರಾಜಕಾರಣಿಗಳು ಯಾರಿದ್ದಾರೆ. ಸುರೇಶ್ ಗೌಡರ ಗೆಲುವಿಗೆ ಸಹಾಯ ಮಾಡಿದ್ದೇನೆ, ಗೌರಿಶಂಕರ್ ಗೆಲುವಿಗೂ ಸಹಾಯ ಮಾಡಿದ್ದೇನೆ, ಉಪಕಾರಕ್ಕೆ ಪ್ರತ್ಯುಪಕಾರ ಮಾಡುತ್ತೇವೆ, ಮಾಡದೇಯೂ ಇರುತ್ತೇವೆ ಎಂದರು.