ತುಮಕೂರು: ಕಳ್ಳತನ ಪ್ರಕರಣದ ಆರೋಪಿ ಲಾಕಪ್ ಪರಾರಿಯಾಗಿರುವ ಪ್ರಕರಣದಲ್ಲಿ ಕರ್ತವ್ಯ ನಿರ್ಲಕ್ಷ್ಯ ತೋರಿದ ಗುಬ್ಬಿ ಠಾಣೆ ಸಬ್ ಇನ್ ಸ್ಪೆಕ್ಟರ್ ದೇವಿಕಾದೇವಿ ಸೇರಿದಂತೆ ಐವರನ್ನು ಅಮಾನತುಗೊಳಿಸಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ವೆಂಕಟ್ ಆದೇಶ ಹೊರಡಿಸಿದ್ದಾರೆ.
ಕಳ್ಳತನ, ಡಕಾಯತಿ ಪ್ರಕರಣದಲ್ಲಿ ಗದಗ ಮೂಲದ ಆರೋಪಿ ಸೈಯದ್ ಆಲಿ ಬಾಳಾ ಸಾಹೇಬ್ ನದಾಫ್ ಎಂಬಾತನನ್ನು ನ್ಯಾಯಾಲಯದ ಅನುಮತಿ ಮೇರೆಗೆ ತನಿಖೆಗಾಗಿ ಗುಬ್ಬಿ ಪೋಲಿಸ್ ಠಾಣೆಯ ಸಬ್ ಇನ್ಸೆಕ್ಟರ್ ದೇವಿಕಾ ದೇವಿ ವಶಕ್ಕೆ ಪಡೆದಿದ್ದರು.
ಪೊಲೀಸ್ ತನಿಖೆಗಾಗಿ ಲಾಕಪ್ ನಲ್ಲಿದ್ದ ಆರೋಪಿ ಬಾಳಾ ಸಾಹೇಬ್ ಫೆಬ್ರವರಿ ೧ ರ ತಡರಾತ್ರಿ ಲಾಕಪ್ ನಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಲಾಕಪ್ ನಿಂದ ತಪ್ಪಿಸಿಕೊಂಡಿರುವ ಆರೋಪಿ ಪತ್ತೆಗಾಗಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಮೂರು ತಂಡಗಳನ್ನು ರಚಿಸಿದ್ದು, ಆರೋಪಿ ಪತ್ತೆಗೆ ಬಲೆ ಬೀಸಿವೆ.
ಲಾಕಪ್ ನಿಂದ ಕಳ್ಳತನ ಆರೋಪಿ ಪರಾರಿ: ಅಧಿಕಾರಿ, ಸಿಬ್ಬಂದಿ ತಲೆದಂಡ?
ಕರ್ತವ್ಯ ನಿರ್ಲಕ್ಷ್ಯಕ್ಕೆ ಬೆಲೆತೆತ್ತ ಸಿಬ್ಬಂದಿ
ನ್ಯಾಯಾಲಯದಿಂದ ಪೊಲೀಸ್ ತನಿಖೆಗೆ ಪಡೆದಿದ್ದ ಆರೋಪಿ ಬಾಳಾ ಸಾಹೇಬ್ ಫೆ.1ರ ತಡರಾತ್ರಿ ಲಾಕಪ್ ನಿಂದ ಎಸ್ಕೇಪ್ ಆದಾಗ ಕರ್ತವ್ಯ ನಿರ್ವಹಿಸುತ್ತಿದ್ದ ಪೇದೆಗಳಾದ ಸುರೇಶ್, ಪ್ರಕಾಶ್, ನವೀನ್ ಕುಮಾರ್, ಅನಿಲ್, ಹಾಗೂ ಕರ್ತವ್ಯ ಲೋಪ ಎಸಗಿದ ತನಿಖಾಧಿಕಾರಿ ದೇವಿಕಾ ದೇವಿ ಅವರನ್ನು ಅಮಾನತು ಮಾಡಲಾಗಿದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಬ್ ಇನ್ ಸ್ಪೆಕ್ಟರ್ ಗಳನ್ನು ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ ಜಿಲ್ಲೆಗಳಿಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ, ಆದರೆ ಗುಬ್ಬಿಯ ಸ್ಥಳೀಯರಾಗಿರುವ ದೇವಿಕಾದೇವಿ ಅವರನ್ನು ವರ್ಗಾವಣೆಗೊಳಿಸದೇ ಇರುವುದು ಚರ್ಚೆಗೆ ಕಾರಣವಾಗಿತ್ತು. ಈಗ ಲಾಕಪ್ ನಿಂದ ಆರೋಪಿ ಪರಾರಿಯಾದ ಪ್ರಕರಣದಲ್ಲಿ ಅಮಾನತುಗೊಂಡಿದ್ದಾರೆ.