ತುಮಕೂರು: ನಾಲ್ಕಾಣೆ ಕಾಫಿ, ಟೀಗೆ ಸೀಮಿತವಾಗದ ಮುದ್ದಹನುಮೇಗೌಡರು ಸಂಸತ್ತಿನಲ್ಲಿ ಜಿಲ್ಲೆಯ ಮಾನ ಮರ್ಯಾದೆ ಉಳಿಸಿದ್ದಾರೆ ಅಂತವರನ್ನು ಸಂಸತ್ತಿಗೆ ಕಳುಹಿಸುವ ಸಂಕಲ್ಪ ಮಾಡಬೇಕೆಂದು ಡಾ.ಜಿ.ಪರಮೇಶ್ವರ ಕರೆ ನೀಡಿದರು.
ನಗರದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಿಂದ ಗೆದ್ದ ಬಹುತೇಕರು ಸೌತ್ ಬ್ಲಾಕ್ ಕ್ವಾಟ್ರಸ್ ನಿಂದ ಹೊರಗೆ ಬರಲಿಲ್ಲ, ಸಂಸತ್ತಿಗೆ ಹೋದರೂ ನಾಲ್ಕಾಣೆ ಕಾಫಿ, ಒಂದು ರೂಪಾಯಿ ಊಟಕ್ಕೆ ಸೀಮಿತವಾದರು ಎಂದು ಮಾಜಿ ಸಂಸದ ಜಿ.ಎಸ್.ಬಸವರಾಜು ಹೆಸರೇಳದೇ ಟೀಕಿಸಿದರು.
ತುಮಕೂರು ಲೋಕಸಭೆ ಚುನಾವಣೆಯಲ್ಲಿ ಹೊರಗಿನವರನ್ನು ಗೆಲ್ಲಿಸಿ ಅವರ ಮನೆ ಬಾಗಿಲಿಗೆ ಹೋಗಬೇಕಾ? ಸೋಮಣ್ಣನಿಗೂ ತುಮಕೂರಿಗೂ ಏನು ಸಂಬಂಧ? ಸೋಮಣ್ಣ ಮಠಕ್ಕೆ ಬಂದಂತೆ ನಾವು ಹೋಗ್ತೀವಿ, ಜಿಲ್ಲೆಯ ಸಮಸ್ಯೆ ಹೊತ್ತು ಹುಡಿಕ್ಕೊಂಡು ಬರ್ಬೇಕಾ ಎಂದು ಪ್ರಶ್ನಿಸಿದರು.
ಜಿಲ್ಲೆಯಲ್ಲಿ ಹೊರಗಿನವ್ರು ಗೆದ್ದಿರುವ ಇತಿಹಾಸ ಇಲ್ಲ, ಈ ಚುನಾವಣೆಯಲ್ಲಿ ಗೆಲ್ಲುವುದೇ ಮುದ್ದಹನುಮೇಗೌಡರು, ಸೋಮಣ್ಣ ಯಾವುದೇ ಕಾರಣಕ್ಕೂ ಗೆಲ್ಲುವುದಿಲ್ಲ ಇದು ದುರಂಕಾರದ ಮಾತಲ್ಲ, ಜನರ ಆತ್ಮವಿಶ್ವಾಸದ ಮಾತು ಎಂದರು.
ರಾಜಣ್ಣ ಹಾಸನ ಉಸ್ತುವಾರಿ ಸಚಿವರಾಗಿಲ್ಲದಿದ್ದರೆ ತುಮಕೂರು ಜನರಿಗೆ ಕುಡಿಯಲು ನೀರು ಇರಲಿಲ್ಲ, ರಾಜಣ್ಣ ನೀರು ಬಿಟ್ಟಿದ್ದರಿಂದಲೇ ಜಿಲ್ಲೆಯ ಜನರಿಗೆ ಕುಡಿಯಲು ನೀರು ದೊರಕುತ್ತಿದೆ ಅದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆವೆ ಎಂದರು.
ಜನಸಂಖ್ಯೆಗೆ ಅನುಗುಣವಾಗಿ ಯೋಜನೆ ರೂಪಿಸುವುದೇ ಕಾಂಗ್ರೆಸ್ ಸರ್ಕಾರದ ಧ್ಯೇಯ ಅದಕ್ಕಾಗಿಯೇ 160 ಕೋಟಿ ಖರ್ಚು ಮಾಡಿ ಸಮೀಕ್ಷೆ ನಡೆಸಿತು, ಆ ಸಮೀಕ್ಷೆ ವರದಿ ಬಿಡುಗಡೆ ಮಾಡುವುದು ಬೇಡವೇ? ರಾಜ್ಯದಲ್ಲಿ ಜನರು ಕಾಂಗ್ರೆಸ್ ಗೆ ಆರ್ಶೀವಾದ ಮಾಡಿದ್ದಾರೆ, ಜನಪರ ಆಡಳಿತ ನೀಡುತ್ತೇವೆ, ತುಮಕೂರಿನಲ್ಲಿ ಕಾಂಗ್ರೆಸ್ ಗೆಲ್ಲಬೇಕಾದ ಅನಿವಾರ್ಯತೆ ಇದೆ, ಜಿಲ್ಲೆಯಲ್ಲಿ ಕಾಂಗ್ರೆಸ್ ಸೋತರೆ ಮುಖ ಹೊತ್ಕೊಂಡು ತಿರ್ಗೋದಕ್ಕೆ ಆಗುತ್ತಾ ಎಂದು ಪ್ರಶ್ನಿಸಿದರು.
ಐದು ವರ್ಷ ಸಂಸದರಾದರೂ ಕೊಬ್ಬರಿ ಬೆಲೆ ಬಗ್ಗೆ ಸಂಸತ್ತಿನಲ್ಲಿ ಮಾತನಾಡಲಿಲ್ಲ, ಒಂದೇ ಒಂದು ಪ್ರಶ್ನೆ ಕೇಳದೇ, ಇಲ್ಲಿಂದ ಹೋಗಿ ಉಂಡು ಮಲಗೋದು ಇಷ್ಟೇ ಆಯ್ತು, ಮುದ್ದಹನುಮೇಗೌಡ ಅವರು ಗೆಲ್ಲುವುದು ನಿಶ್ಚಿತ ಎಂದು ಸವಾಲು ಹಾಕಿದರು.
ಜಿ.ಎಸ್.ಬಸವರಾಜು ಜೊತೆಗೆ ಕಾಂಗ್ರೆಸ್ ಮುಖಂಡರಿಗೆ ಒಳ್ಳೇ ಸಂಬಂಧವಿದೆ, ಚುನಾವಣೆ ಮುಗಿಯೋವರೆಗೆ ಎಲ್ಲ ಸಂಬಂಧಗಳು ಬಂದ್ ಆಗ್ಬೇಕು ಎಂದು ತಾಕೀತು ಮಾಡಿದ ಅವರು, ಜ್ಯೋತಿಗಣೇಶ್ ಬರ ನಿರ್ವಹಣೆ ಮಾಡಿಲ್ಲ ಎಂದು ಆರೋಪಿಸುತ್ತಾರೆ, ಅವ್ರ ಅಪ್ಪ ಅವರಿಗೆ ಸರಿಯಾಗಿ ಹೇಳಿಕೊಟ್ಟಿಲ್ಲ ಎಂದು ಲೇವಡಿ ಮಾಡಿದರು.