ತುಮಕೂರು: ವಿಧಾನಸಭಾ ಚುನಾವಣೆಗೆ ಸಿದ್ಧಗೊಂಡಿರುವ ಮಾಜಿ ಸಚಿವ ಸೊಗಡು ಶಿವಣ್ಣ ಮತಕ್ಕಾಗಿ ಜೋಳಿಗೆ ಹಿಡಿದು ಹೊರಡಲು ಸಿದ್ಧರಾಗಿದ್ದಾರೆ. ಮಾ.12ರಂದು ಎನ್ ಆರ್ ಕಾಲೋನಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ಅಧಿಕೃತವಾಗಿ ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ.
ಮತ ಹಾಗೂ ಹಣಕ್ಕಾಗಿ ಜೋಳಿಗೆ ಹಿಡಿದು, ತಮಟೆಯೊಂದಿಗೆ ಮನೆ ಮನೆಗೆ ತೆರಳಿ ಮತಯಾಚನೆ ಮಾಡುವುದರೊಂದಿಗೆ 1994ರಿಂದ 2013ರವರೆಗೆ ನಗರದ ಅಭಿವೃದ್ಧಿಗೆ ತಂದಿರುವ ಯೋಜನೆಗಳ ಬಗ್ಗೆ ಮತದಾರರ ಅರಿವು ಮೂಡಿಸುವ ಕಾಯಕಕ್ಕೆ ಕೈ ಹಾಕಿರುವುದಾಗಿ ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಒಂದು ಜೋಳಿಗೆ ನೋಟು, ಇನ್ನೊಂದು ಜೋಳಿಗೆ ವೋಟಿಗಾಗಿ ಹಿಡಿದು ಮನೆ ಮನೆ ಬಾಗಿಲಿಗೆ ಹೋಗಿ ಶಾಂತಿ ಮತ್ತು ಕಾಯಕ ಮಂತ್ರವನ್ನು ಜನರಿಗೆ ತಿಳಿಸುವ ಮೂಲಕ ಪಾರದರ್ಶಕ ಆಡಳಿತಕ್ಕಾಗಿ ಮತ ನೀಡುವಂತೆ ಮನವಿ ಮಾಡುವುದಾಗಿ ತಿಳಿಸಿದರು.
ಗುಂಡು, ತುಂಡು, ಸೀರೆ, ಕುಕ್ಕರ್ ಹಂಚುತ್ತಿದ್ದಾರೆ, ಯುವಕರಿಗೆ ಗುಂಡು ತುಂಡು ಕೊಡಿಸುವ ಮೂಲಕ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ, ಆಮಿಷಗಳನ್ನು ಒಡ್ಡುವ ಮೂಲಕ ಮತದಾರರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವವನ್ನು ಎಚ್ಚರಿಸುವುದಕ್ಕಾಗಿ ಜೋಳಿಗೆ ಹಿಡಿದು, ತಮಟೆ ಬಡಿದುಕೊಂಡು ಮನೆ ಮನೆಗೆ ಹೋಗಿ ಕರಪತ್ರ ಹಂಚುತ್ತೇನೆ, ಸೋಮವಾರ ಎಪಿಎಂಸಿಯಲ್ಲಿ ಪ್ರಚಾರ ಕಾರ್ಯ ಆರಂಭಿಸಲಾಗುವುದು, ಎಲ್ಲೆಲ್ಲಿ ಜನಸಂದಣಿ ಇರುತ್ತದೆ ಅಲ್ಲಿ ಪ್ರಚಾರ ನಡೆಸುವುದಾಗಿ ತಿಳಿಸಿದರು.
2013, 2018ಕ್ಕೆ ಟಿಕೆಟ್ ನಾನು ತ್ಯಾಗ ಮಾಡಿಲ್ಲವೇ? ಅಧಿಕಾರ ಇಲ್ಲದಿದ್ದರೂ ಜನಸೇವೆ ಮಾಡುತ್ತಿಲ್ಲವೇ ನನಗೆ ಜನಬಲವಿದ್ದರೆ ಟಿಕೆಟ್ ಕೊಡುತ್ತಾರೆ, ಜನರು ಚುನಾವಣೆಗೆ ನಿಲ್ಲುವಂತೆ ಒತ್ತಾಯ ಮಾಡುತ್ತಿದ್ದಾರೆ ಅದಕ್ಕಾಗಿ ಟಿಕೆಟ್ ಕೇಳುತ್ತಿದ್ದೇನೆ, ಕೋವಿಡ್ ಸಂದರ್ಭದಲ್ಲಿ ಮುಸ್ಲಿಂ, ಹಿಂದೂ ಬೇಧವಿಲ್ಲದೆ ಚಿಕಿತ್ಸೆ ಕೊಡಿಸಲಾಗಿದೆ, ಜಾತಿ ಬೇಧವಿಲ್ಲದೆ ಅಂತಿಮ ಕ್ರಿಯೆಯನ್ನು ಮಾಡಲಾಗಿದೆ ಎಂದರು.
ಸ್ಮಾರ್ಟ್ ಸಿಟಿ ಯೊಜನೆಯಡಿ ನಿರ್ಮಿಸಿರುವ ರಿಂಗ್ ರಸ್ತೆ ನಿರ್ಮಾಣಕ್ಕೆ ಒಂದು ಕಿಲೋ ಮೀಟರ್ ಗೆ 12 ಕೋಟಿ ಖರ್ಚಾಗಿದೆ ಎಂದರೆ ಯೋಚನೆ ಮಾಡಬೇಕಿದೆ, ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಜೋಳಿಗೆ ಹಿಡಿದು ಹೊರಟಿದ್ದೇನೆ, ಒಂದು ಕಡೆ ಸೀರೆ ಕುಕ್ಕರ್ ಹಂಚುತ್ತಾರೆ, ಇನ್ನೊಂದು ಗುಂಡು ತುಂಡು ಎನ್ನುತ್ತಾರೆ ನಾಚಿಗೆಯಾಗುವುದಿಲ್ಲವೇ ಅವರಿಗೆ ಎಂದು ಪ್ರಶ್ನಿಸಿದರು.
ಎನ್.ಆರ್.ಕಾಲೋನಿ ಮುಖಂಡ ನರಸಿಂಹಯ್ಯ ಮಾತನಾಡಿ, ನಗರದಲ್ಲಿ ದಲಿತರ ಪರ ಅಭಿವೃದ್ಧಿಗಳು ನಡೆದಿದ್ದರೆ ಅದಕ್ಕೆ ಸೊಗಡು ಶಿವಣ್ಣ ಕಾರಣ, ದಲಿತರೊಂದಿಗೆ ಉತ್ತಮ ಸಂಬಂಧ, ಕಾಳಜಿಯುಳ್ಳ ಸೊಗಡು ಶಿವಣ್ಣ ಅವರ ಪ್ರಚಾರ ಕಾರ್ಯವನ್ನು ಎನ್.ಆರ್.ಕಾಲೋನಿಯಿಂದಲೇ ಪ್ರಾರಂಭಿಸಲಾಗುವುದು ಎಂದರು.
ಎನ್.ಆರ್.ಕಾಲೋನಿಯ ಜನರಿಂದಲೇ ಸೊಗಡು ಶಿವಣ್ಣ ಅವರ ಠೇವಣಿಗೆ ಹಣ ಸಂಗ್ರಹಿಸಿ ಕೊಡಲಾಗುವುದು, ದುರ್ಗಮ್ಮ, ಪೂಜಮ್ಮ ದೇಗುಲದಲ್ಲಿ ಪೂಜೆ ಸಲ್ಲಿಸಿ, ಭಾನುವಾರ 3 ಗಂಟೆಗೆ ಪ್ರಚಾರ ಕಾರ್ಯ ಆರಂಭವಾಗಲಿದ್ದು, ಎನ್.ಆರ್.ಕಾಲೋನಿಯ ಎಲ್ಲ ಬೀದಿಗಳಿಗೂ ತೆರಳಿ ಮತಯಾಚನೆ ಮಾಡುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನರಸಿಂಹಯ್ಯ, ಶಾಂತರಾಜು, ರಂಗನಾಯ್ಕ್, ಜಯಸಿಂಹ, ಶಬ್ಬೀರ್ ಅಹಮದ್, ಗೋವಿಂದರಾಜು, ಕೆ.ಪಿ.ಮಮತಾ, ಗೋಕುಲ್ ಮಂಜುನಾಥ್ ಇತರರಿದ್ದರು.