ತುಮಕೂರು: ಇನ್ನ್ಮೇಲೆ ನಾನು ಬಿಜೆಪಿ ಕಚೇರಿಗೆ ಕಾಲಿಡುವುದಿಲ್ಲ, ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದರು.
ಬೆಂಬಲಿಗರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ನನ್ನ ಪಕ್ಷ ನನ್ನ ಕೈ ಹಿಡಿಯುತ್ತೆ ಎಂದು ಭಾವಿಸಿದ್ದೆ, ಕೈ ಬಿಟ್ಟಿದೆ, ಮನೆಯಲ್ಲಿರುವ ಪಕ್ಷದ ಭಾವುಟಗಳನ್ನು ಇಂದು ಬೇರೆ ಕಡೆ ಸಾಗಿಸಿ, ಗುರುವಾರ ರಾಜೀನಾಮೆ ಸಲ್ಲಿಸುತ್ತೇನೆ ಎಂದರು.
ಕಾಂಗ್ರೆಸ್ ಪಕ್ಷ ಕಟ್ಟಿದವರು ಇಂದು ಬಿಜೆಪಿ ಅರಮನೆಯಲ್ಲಿದ್ದಾರೆ, ಬಿಜೆಪಿ ಕಾರ್ಯಕರ್ತರನ್ನು ಜೈಲಿಗೆ ಹಾಕಿಸಿದವರನ್ನು ತಲೆ ಮೇಲೆ ಕುಳಿಸಿಕೊಂಡಿದ್ದೇವೆ, ಪಕ್ಷಕ್ಕಾಗಿ ಎಲ್ಲವನ್ನು ಸಹಿಸಿಕೊಂಡಿದ್ದೇನೆ, ಮುಂದಿನದು ಜನರ ನಿರ್ಧಾರಕ್ಕೆ ಬಿಟ್ಟದ್ದು ಎಂದರು.
ಅವರೆಕಾಯಿ ಮಾರುತ್ತಿದ್ದ ನನ್ನನ್ನು ಶಾಸಕನಾಗಿ, ಸಚಿವರನ್ನಾಗಿ ಮಾಡಿದ್ದೀರಿ, ಜನರನ್ನು ಬಿಟ್ಟರೆ ನನಗೆ ಬೇರೆ ಯಾರು ಇಲ್ಲ, ಕಾರ್ಯಕರ್ತರು ಬೆಂಬಲಿಗರು ಹೇಳಿದಂತೆ ಚುನಾವಣೆಗೆ ಸ್ಪರ್ಧಿಸುವುದು ಸತ್ಯ, ನಾನು ಕಬ್ಬಡಿ ಆಟಗಾರ ಎಲ್ಲವನ್ನು ಸ್ಪೂರ್ತಿಯಿಂದ ತೆಗೆದುಕೊಳ್ಳುತ್ತೇನೆ, ಆಟದ ಕೆಚ್ಚನ್ನು ಬಿಟ್ಟಿಲ್ಲ, ತೊಡೆ ತಟ್ಟುವುದನ್ನು ಮರೆತಿಲ್ಲ ಎಂದು ಟಾಂಗ್ ನೀಡಿದರು.