ಬೆಂಗಳೂರು: ಕಾಂಗ್ರೆಸ್ ಪಕ್ಷದ ಗ್ಯಾರೆಂಟಿ ಯೋಜನೆಗಳನ್ನು ಈ ಆರ್ಥಿಕ ವರ್ಷದಿಂದಲೇ ಜಾರಿಗೆ ತರಲು ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯಾವುದೇ ಧರ್ಮ, ಜಾತಿ ಸೇರಿದಂತೆ ಯಾವುದೇ ನಿರ್ಬಂಧವಿಲ್ಲದಂತೆ ಯೋಜನೆಯನ್ನು ತಲುಪಿಸಲಾಗುವುದು ಎಂದು ಹೇಳಿದರು.
ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ವಿದ್ಯುತ್ ಎಲ್ಲರಿಗೂ ಉಚಿತವಾಗಿ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ, ಯಾರು ಎಷ್ಟು ವಿದ್ಯುತ್ ಬಳಸುತ್ತಿದ್ದಾರೆ, ವಿದ್ಯುತ್ ಬಳಕೆ ಪ್ರಮಾಣದ ಆಧಾರದ ಮೇಲೆ 200 ಯೂನಿಟ್ ವಿದ್ಯುತ್ ಬಳಕೆಗೆ ಬಿಲ್ ಪಾವತಿ ಮಾಡುವಂತಿಲ್ಲ ಎಂದರು.
ಪ್ರತಿ ತಿಂಗಳು ಬಳಸುವ ವಿದ್ಯುತ್ ಪ್ರಮಾಣದಲ್ಲಿ ವಾರ್ಷಿಕವಾಗಿ ಶೇ.10ರಷ್ಟು ಹೆಚ್ಚುವರಿ ಬಳಕೆ ಅವಕಾಶ ನೀಡಲಾಗಿದೆ, 200 ಯೂನಿಟ್ ವಿದ್ಯುತ್ ಸಂಪೂರ್ಣ ಉಚಿತವಾಗಿ ಆಗಸ್ಟ್ ನಿಂದ ಪ್ರಾರಂಭವಾಗಲಿದೆ. ಅಲ್ಲಿಯವರೆಗೆ ವಿದ್ಯುತ್ ಬಾಕಿಯನ್ನು ಗ್ರಾಹಕರೇ ಕಟ್ಟಬೇಕು ಎಂದು ಹೇಳಿದರು.
76ನೇ ಸ್ವಾತಂತ್ರ್ಯ ದಿನಾಚರಣೆಯ ಕೊಡುಗೆ ಗೃಹಲಕ್ಷ್ಮೀ
ಗೃಹಲಕ್ಷ್ಮೀ ಯೋಜನೆ ಜಾರಿಗೆ ತೀರ್ಮಾನ ಕೈಗೊಳ್ಳಲಾಗಿದೆ, ಬ್ಯಾಂಕ್ ಮತ್ತು ಆಧಾರ್ ಕಾರ್ಡ್ ನಂಬರ್ ನೀಡಬೇಕಿದೆ, ಮನೆ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಜಮಾ ಮಾಡಲಾಗುವುದು ಅದಕ್ಕಾಗಿ ಜೂ.15ರಿಂದ ಜುಲೈ.15ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು, ಆಗಸ್ಟ್ 15ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸಿ ಆಗಸ್ಟ್ 15ರಿಂದ ಹಣವನ್ನು ಜಮಾ ಮಾಡಲಾಗುವುದು ಎಂದು ಘೋಷಿಸಿದರು.
ಬಿಪಿಎಲ್ ಮತ್ತು ಎಪಿಎಲ್ ಕುಟುಂಬಗಳ ಯಜಮಾನಿಗಳಿಗೆ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಾಗಿರುತ್ತಾರೆ, ರಾಜ್ಯದಲ್ಲಿರುವ 18 ವರ್ಷದ ಮೇಲ್ಪಟ್ಟ ಯಜಮಾನಿಯಾದ ಹೆಣ್ಣು ಮಕ್ಕಳಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಅಕೌಂಟಿಗೆ ಜಮಾ ಮಾಡಲಾಗುವುದು ಎಂದರು.
ವಿಧವಾವೇತನ, ವೃದ್ಧಾಪ್ಯ ವೇತನ ಪಡೆಯುವವರಿಗೂ ಸಹ ಗೃಹ ಲಕ್ಷ್ಮೀ ಯೋಜನೆಯಡಿ ಹೆಚ್ಚುವರಿ 2 ಸಾವಿರ ನೀಡಲು ಸರ್ಕಾರ ತೀರ್ಮಾನ ಕೈಗೊಂಡಿದೆ, ಮನೆ ಯಜಮಾನಿ ಯಾರು ಎಂಬುದನ್ನು ಕುಟುಂಬದವರೇ ತೀರ್ಮಾನಿಸಬೇಕು, ಬಹುಪತ್ನಿತ್ವ ಹೊಂದಿದ್ದವರ ಒಂದು ಕುಟುಂಬಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಅನ್ನಭಾಗ್ಯ ಯೋಜನೆಯನ್ನು ಬಿಜೆಪಿ ಸರ್ಕಾರ 5 ಕೆ.ಜಿ.ಗೆ ಇಳಿಸಿದೆ, ಆಹಾರ ಧಾನ್ಯಗಳನ್ನು 10 ಕೆ.ಜೆ. ಕೊಡುವುದಾಗಿ ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದ್ದೆವು, ಈಗಾಗಲೇ ಪಡಿತರ ಬಿಡುಗಡೆಯಾಗಿರುವುದರಿಂದ ಜು.1ರಿಂದ ಬಿಪಿಎಲ್ ಕಾರ್ಡ್ ದಾರರಿಗೆ ಪ್ರತಿಸದಸ್ಯನಿಗೆ 10 ಕೆಜಿ ಹಾಗೂ ಅಂತ್ಯೋದಯ ಪಡಿತರದಾರರಿಗೆ ಅಕ್ಕಿ ಕೊಡುತ್ತೇವೆ ಎಂದು ಘೋಷಿಸಿದರು.
ಜೂ.11ರಿಂದಲೇ ಉಚಿತ ಬಸ್ ಪ್ರಯಾಣ
ಸಮಾಜದಲ್ಲಿ ಶೇ.50ರಷ್ಟು ಮಹಿಳೆಯರಿದ್ದಾರೆ, ರಾಜ್ಯದೊಳಗೆ ವಿದ್ಯಾರ್ಥಿಗಳನ್ನು ಸೇರಿದಂತೆ ಇದೇ ತಿಂಗಳು 11ನೇ ತಾರೀಕಿನಿಂದ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ, ಎಸಿ ಮತ್ತು ಲಕ್ಷ್ಯುರಿ ಬಸ್ ಹೊರತುಪಡಿಸಿ, ರಾಜ್ಯದೊಳಗೆ ಸಂಚರಿಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆ 11ರಂದು ಬೆಂಗಳೂರಿನಲ್ಲಿ ಚಾಲನೆ ನೀಡಲಾಗುವುದು.
ಬಿಎಂಟಿಸಿ, ಕೆಎಸ್ಆರ್ ಟಿಸಿಯನ್ನು ಒಳಗೊಂಡಂತೆ ಎಸಿ ಮತ್ತು ಸ್ಲೀಪರ್ ಬಸ್ ಗಳನ್ನು ಹೊರತುಪಡಿಸಿ 50:50ರ ಮಾದರಿಯಲ್ಲಿ ಮಹಿಳೆಯರ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.
2022-2023ರಲ್ಲಿ ತೇರ್ಗಡೆ ಹೊಂದಿರುವ ಸ್ನಾತಕ, ಸ್ನಾತಕೋತ್ತರ ಪದವೀಧರರಿಗೆ 24 ತಿಂಗಳವರೆಗೆ ಪ್ರತಿ ತಿಂಗಳು 3 ಸಾವಿರ ಹಾಗೂ ಡಿಪ್ಲೊಮಾ ಪದವೀಧರರಿಗೆ 1,500 ಪ್ರೋತ್ಸಾಹಧನ ನೀಡಲಾಗುವುದು, ಉದ್ಯೋಗಕ್ಕೆ ಸೇರಿದವರಿಗೆ ಪ್ರೋತ್ಸಾಹಧನ ನೀಡುವುದಿಲ್ಲ, ನಿರುದ್ಯೋಗಿ ಎಂದು ಡಿಕ್ಲೇರ್ ಮಾಡಿಕೊಳ್ಳಬೇಕಿದೆ.
ಯುವ ನಿಧಿ ಯೋಜನೆಯ ಫಲಾನುಭವಿಗಳಾಗಲು ಅರ್ಜಿ ಹಾಕಬೇಕಿದೆ, ತೃತೀಯಲಿಂಗಿಗಳು ಸಹ ಯೋಜನೆಯ ಫಲಾನುಭವಿಗಳಾಗಲು ಅವಕಾಶ ಕಲ್ಪಿಸಲಾಗಿದೆ, ವ್ಯಾಸಂಗ ಪೂರ್ಣಗೊಂಡು ಆರು ತಿಂಗಳಾದರೂ ಉದ್ಯೋಗವನ್ನು ಪಡೆಯದ ಪದವೀಧರರಿಗೆ 24 ತಿಂಗಳು ನಿರುದ್ಯೋಗ ಭತ್ಯೆಯನ್ನು ನೀಡಲಾಗುವುದು.