ಲೈಂಗಿಕ ಕಿರುಕುಳ: ಶಿಕ್ಷಕನ ರಕ್ಷಣೆಗೆ ಮುಂದಾದ ಕುಣಿಗಲ್ ಬಿಇಒ..?

ತುಮಕೂರು: ಲೈಂಗಿಕ ಕಿರುಕುಳ ಆರೋಪಕ್ಕೆ ತುತ್ತಾದ ಶಿಕ್ಷಕನ ರಕ್ಷಣೆಗೆ ಕುಣಿಗಲ್ ಬಿಇಒ ಮುಂದಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕುಣಿಗಲ್ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ, ಸಹ ಶಿಕ್ಷಕರೊಬ್ಬರು ಲೈಂಗಿಕ ಕಿರುಕುಳ ನೀಡುವುದಲ್ಲದೆ, ಕುಡಿದು ಬಂದು ಶಾಲೆಯಲ್ಲಿಯೇ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದಾರೆ ಎಂದು ಬಿಇಒ ಬೋರೇಗೌಡ ಅವರಿಗೆ ನೀಡಿದ್ದ ದೂರಿನ ಪ್ರಾಥಮಿಕ ವಿಚಾರಣೆಯನ್ನು ಕೈಗೊಂಡು ಕಿರುಕುಳಕ್ಕೆ ಒಳಗಾದ ಶಿಕ್ಷಕಿ ವಿಚಾರಣೆ ವೇಳೆ ಕಿರುಕುಳಕ್ಕೆ  ಸಂಬಂಧಿಸಿದಂತೆ ದಾಖಲೆಗಳನ್ನು ಒದಗಿಸಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಪ್ರಾಥಮಿಕ ವಿಚಾರಣೆಯಲ್ಲಿ ಕಿರುಕುಳಕ್ಕೆ ಒಳಗಾದ ಶಿಕ್ಷಕಿ ಹಾಗೂ ಕಿರುಕುಳವನ್ನು ನೀಡಿದ ಶಿಕ್ಷಕನನ್ನು ರಾಜೀ ಮಾಡಿಸುವ ನಿಟ್ಟಿನಲ್ಲಿಯೇ ವರದಿಯನ್ನು ಸಿದ್ಧಪಡಿಸಿದ್ದು, ದೂರು ನೀಡಿದ್ದ ಶಿಕ್ಷಕಿಯ ಸಹಿಯನ್ನು ಪಡೆಯದೇ, ತರಾತುರಿಯಲ್ಲಿ ವಿಚಾರಣೆಯಲ್ಲಿ ಭಾಗಿಯಾಗಿದ್ದ ಇತರ ಸದಸ್ಯರ ಸಹಿಯನ್ನು ಪಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಶಿಕ್ಷಕಿಯು ನೀಡಿದ್ದ ದೂರಿನ ಅಂಶಗಳನ್ನು ಪರಿಗಣಿಸದೇ ದಾಖಲಾತಿಗಳನ್ನು ಕೇಳುವ ಮೂಲಕ ಕುಣಿಗಲ್ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬೋರೇಗೌಡ ಅವರು ಪೊಲೀಸ್ ಇಲಾಖೆ ಮಾಡಬೇಕಾದ ಕೆಲಸವನ್ನು ಮಾಡಲು ಮುಂದಾಗಿ, ವಿಚಾರಣೆ ನೆಪದಲ್ಲಿ ಪ್ರಕರಣದಲ್ಲಿ ತಿಪ್ಪೇಸಾರಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಶಿಕ್ಷಕಿ ನೀಡಿದ್ದ ದೂರಿನ ಬಗ್ಗೆ ಆರೋಪಿತ ಶಿಕ್ಷಕನಿಂದ ನನ್ನ ಮೇಲಿರುವ ಆಪಾದನೆಗಳು ಸತ್ಯಕ್ಕೆ ದೂರುವಾದ್ದದ್ದು, ನಾನು ಶಿಕ್ಷಕಿಗೆ ಯಾವುದೇ ತೊಂದರೆ ನೀಡಿರುವುದಿಲ್ಲ ಎಂಬ ಹೇಳಿಕೆ ಆಧಾರದ ಮೇಲೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿಕ್ಷಕರು ಇನ್ನು ಮುಂದೆ ಇಂತಹ ಪ್ರಕರಣಗಳು ಮರುಕಳಿಸದಂತೆ ಶೈಕ್ಷಣಿಕ ಪ್ರಗತಿಯಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಿ ವಿಚಾರಣೆಯನ್ನು ಮುಕ್ತಾಯಗೊಳಿಸಿರುವ ವರದಿ “ಪ್ರಜಾಕಹಳೆ”ಗೆ ಲಭ್ಯವಾಗಿದೆ.

ನೊಂದ ಶಿಕ್ಷಕಿಗೆ ನ್ಯಾಯ ಕೊಡಿಸಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ರೀತಿಯ ಪ್ರಕರಣಗಳಲ್ಲಿ ಏಕಪಕ್ಷೀಯವಾಗಿ ವರ್ತಿಸುವ ಮೂಲಕ ಇನ್ನಷ್ಟು ಶೋಷಣೆಗೆ ಒಳಗಾಗುವಂತೆ ಮಾಡಿರುವುದು ಸರಿಯೇ? ನೊಂದ ಶಿಕ್ಷಕಿಯೇ ಆರೋಪಕ್ಕೆ ಸಂಬಂಧಿಸಿದಂತೆದಾಖಲೆಗಳನ್ನು ಒದಗಿಸಬೇಕಾದರೆ, ವಿಚಾರಣೆ ನಡೆಸುವ ಅವಶ್ಯಕತೆ ಏನಿತ್ತು? ನೊಂದ ಶಿಕ್ಷಿಕಿಯ ಆರೋಪಗಳಿಗೆ ಸದರಿ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಮಾಹಿತಿಯನ್ನು ಸಂಗ್ರಹಿಸಿ ವರದಿ ಸಲ್ಲಿಸಬೇಕಾದ ಅಧಿಕಾರಿಯೇ? ಕಿರುಕುಳ ನೀಡಿದ ಶಿಕ್ಷಕನ ಪರವಾಗಿ ನಿಂತು ಪ್ರಕರಣವನ್ನು ಮುಕ್ತಾಯಗೊಳಿಸಲು ಯತ್ನಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

Verified by MonsterInsights