ಕೊರಟಗೆರೆ: ತಾಲ್ಲೂಕಿನ ಸಿ ಎನ್ ದುರ್ಗ ಹೋಬಳಿಯ ಜೆಟ್ಟಿ ಅಗ್ರಹಾರ ಬಳಿ ತುಮಕೂರು-ಮಧುಗಿರಿ ರಾಜ್ಯ ಹೆದ್ದಾರಿಯಲ್ಲಿ ಲಾರಿ ಹಾಗೂ ಎರ್ಟಿಗಾ ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಐದು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಈ ಅಪಘಾತದಲ್ಲಿ ಮೃತರಾದವರನ್ನು ದಾವಣೆಗೆರೆ ಮೂಲದ ಶಿವು ನಾಯಕ್( 32), ಕೊಡಿಗೇನಹಳ್ಳಿಯ ಪರಮೇಶ್ ಎಂದು ಗುರುತಿಸಲಾಗಿದೆ. ಮಧ್ಯ ರಾತ್ರಿ ಸುಮಾರು 3 ಗಂಟೆ ಸಮಯದಲ್ಲಿ ಭೀಕರ ಅಪಘಾತ ಸಂಭವಿಸಿದೆ.
ಸ್ನೇಹಿತನ ಮದುವೆಗೆ ತೆರಳಿ ವಾಪಸ್ ಕೊರಟಗೆರೆ ಹಾಗೂ ಕೊಡಿಗೇನಹಳ್ಳಿ ಕಡೆಗೆ ವಾಪಸ್ ಬರುತಿದ್ದ ಯುವಕರ ತಂಡದಲ್ಲಿದ್ದ ಐವರು ತೀವ್ರವಾಗಿ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಗೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದು ಬಂದಿದೆ.
ದಾಬಸ್ ಪೇಟೆಯಲ್ಲಿ ಮದುವೆ ಮುಗಿಸಿ ತುಮಕೂರು ಮೂಲಕ ಕೊಡಿಗೇನಹಳ್ಳಿ ಕಡೆಗೆ ಕಾರಿನಲ್ಲಿ ಒಟ್ಟು 7 ಜನರು ಪ್ರಯಾಣಿಸುತ್ತಿದ್ದರು. ಆಂಧ್ರದಿಂದ ತುಮಕೂರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.
ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯ ಸಿಪಿಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.