ಲೋಕಸಭೆ ಚುನಾವಣೆ ಸನ್ನಿಹಿತ ಆಗುತ್ತಿರುವಂತೆ ಸಂಘಟನೆ ಬಲಪಡಿಸಲು ಮುಂದಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಜಿಲ್ಲಾಧ್ಯಕ್ಷರನ್ನು ಬದಲಾವಣೆ, ಕೆಲ ಶಾಸಕರಿಗೂ ಜವಾಬ್ದಾರಿಯನ್ನು ನೀಡಿದ್ದಾರೆ.
ತುಮಕೂರು ಜಿಲ್ಲಾಧ್ಯಕ್ಷರಾಗಿರುವ ಗಣಿ ಉದ್ಯಮಿ ಹೆಬ್ಬಾಕ ರವಿಶಂಕರ್ ಮುಂದುವರೆದಿದ್ದು, ಮಧುಗಿರಿ ಜಿಲ್ಲಾಧ್ಯಕ್ಷರಾಗಿದ್ದ ಬಿ.ಕೆ.ಮಂಜುನಾಥ್ ಅವರನ್ನು ಬದಲಿಸಿ ಹನುಮಂತೇಗೌಡ ಅವರ ಹೆಗಲಿಗೆ ಜವಾಬ್ದಾರಿಯನ್ನು ಹೊರಿಸಲಾಗಿದೆ.
ಬಿಜೆಪಿಯ ಎರಡು ಸಂಘಟನಾತ್ಮಕ ಜಿಲ್ಲೆಗಳಲ್ಲಿ ಲಿಂಗಾಯತ-ಒಕ್ಕಲಿಗ ಸಮುದಾಯಕ್ಕೆ ಮಣೆ ಹಾಕಿದ್ದು, ಜಿಲ್ಲೆಯಲ್ಲಿನ ಪ್ರಬಲ ಸಮುದಾಯಗಳಿಗೆ ಅಧಿಕಾರ ನೀಡುವ ಮೂಲಕ ಸಂಕ್ರಾಂತಿಯಲ್ಲಿ ಲೋಕಸಭೆ ಚುನಾವಣೆಯ ದಾಳವನ್ನು ಉರುಳಿಸಿದೆ.
ರೇಸ್ ನಿಂದ ಹೆಬ್ಬಾಕ ಹೊರಕ್ಕೆ?
ಹಾಲಿ ಸಂಸದ ಜಿ.ಎಸ್.ಬಸವರಾಜು ಅತ್ಯಾಪ್ತ ಬಣದ ಮುಖ್ಯಸ್ಥರಾಗಿರುವ ಹೆಬ್ಬಾಕ ರವಿಶಂಕರ್ ಅಲಿಯಾಸ್ ರವಿ ಹೆಬ್ಬಾಕ, ಲೋಕಸಭೆಯ ಟಿಕೆಟ್ ನ ಪ್ರಬಲ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದು, ರಾಜಕೀಯ ಕುಟುಂಬದ ಹಿನ್ನೆಲೆ, ಜಿಎಸ್ಬಿ ಬಣದಿಂದಾಗಿ ಲಾಂಗ್ ಸ್ಟ್ಯಾಂಡಿಂಗ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಕಳೆದ ಎರಡು ಚುನಾವಣೆಗಳಿಂದ ಗುಬ್ಬಿ ವಿಧಾನಸಭಾ ಕ್ಷೇತ್ರದಿಂದ ಉಮೇದುದಾರರಾಗಲು ಉತ್ಸಾಹ ತೋರಿದರು, ಹೈಕಮಾಂಡ್ ಗ್ರೀನ್ ಸಿಗ್ನಲ್ ಸಿಕ್ಕಿರಲಿಲ್ಲ.
ಹಾಲಿ ಸಂಸದ ಜಿ.ಎಸ್.ಬಸವರಾಜು ಅವರು ವಯಸ್ಸಿನ ಕಾರಣದಿಂದ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸದೇ ಇರುವುದರಿಂದ ಬಿಜೆಪಿ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗಿದ್ದು, ರಿಯಲ್ ಎಸ್ಟೇಟ್ ಉದ್ಯಮಿ ಸ್ಫೂರ್ತಿ ಚಿದಾನಂದ್, ಸಿದ್ಧಗಂಗಾ ಆಸ್ಪತ್ರೆಯ ಮುಖ್ಯಸ್ಥ ಡಾ.ಪರಮೇಶ್ವರ್, ಎಬಿವಿಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ವಿನಯ್ ಬಿದರೆ, ರವಿ ಹೆಬ್ಬಾಕ, ಮಾಜಿ ಸಚಿವ ವಿ.ಸೋಮಣ್ಣ ಪ್ರಬಲ ಆಕಾಂಕ್ಷಿಗಳಾಗಿದ್ದು, ರವಿ ಹೆಬ್ಬಾಕ ಅವರಿಗೆ ಚುನಾವಣೆ ಹೊಸ್ತಿಲಲ್ಲಿ ಸಂಘಟನೆಯ ಜವಾಬ್ದಾರಿಯಲ್ಲಿ ಮುಂದುವರೆಸುವ ಮೂಲಕ ಚುನಾವಣೆ ರೇಸ್ ನಿಂದ ಹೈಕಮಾಂಡ್ ಹೊರಕ್ಕೆ ಇಟ್ಟಿದೆ ಎನ್ನಲಾಗುತ್ತಿದೆ.
ಭೀಮನಕುಂಟೆ ಹನುಮಂತೇಗೌಡ ಎಂಬ ಸಂಘಟನಾ ಚತುರ
ಮಧುಗಿರಿ ತಾಲ್ಲೂಕು ದೊಡ್ಡೇರಿ ಹೋಬಳಿಯ ಭೀಮನಕುಂಟೆ ಹನುಮಂತೇಗೌಡ, ಎಂಜನಿಯರಿಂಗ್ ಪದವೀಧರ, ಕುಂಚಿಟಿಗ ಒಕ್ಕಲಿಗ ಸಮುದಾಯದವರಾದ ಹನುಮಂತೇಗೌಡ ಯಶಸ್ವಿ ಉದ್ಯಮಿಯಾಗಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಪ್ರಬಲ ಆಕಾಂಕ್ಷಿಯಾಗಿದ್ದರು.
ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುವ ಮೂಲಕ ಪಕ್ಷವನ್ನು ಬಲಪಡಿಸಿದ ಸಂಘಟನಾ ಚತುರ, ಪಕ್ಷದ ವರಿಷ್ಠರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದು, ಭವಿಷ್ಯದಲ್ಲಿ ಮಧುಗಿರಿಯಲ್ಲಿ ಪ್ರಬಲ ಪೈಪೋಟಿ ನೀಡಲು, ಮಧುಗಿರಿ ಸಂಘಟನಾತ್ಮಕ ಜಿಲ್ಲೆಯಲ್ಲಿ ಹೆಚ್ಚಿರುವ ಕುಂಚಿಟಿಗ ಸಮುದಾಯವನ್ನು ಬಿಜೆಪಿಗೆ ಸೆಳೆಯಲು ಮುಂದಾಗಿದೆ.