ಕೊರಟಗೆರೆ: ವಸತಿ ಶಾಲೆಯಲ್ಲಿನ ಮಕ್ಕಳನ್ನು ಬಲವಂತದಿಂದ ಶಾಲೆಯಿಂದ ಹೊರಗೆ ಕಳುಹಿಸಿಕೊಡುತ್ತಿರುವ ಘಟನೆ ತಾಲ್ಲೂಕಿನ ಬೈಚಾಪುರ ಮೊರಾರ್ಜಿ ಶಾಲೆಯಲ್ಲಿ ಬೆಳಕಿಗೆ ಬಂದಿದೆ.
ಸರ್ಕಾರ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಪ್ರಾರಂಭಿಸಿದ ವಸತಿ ಶಾಲೆಯಲ್ಲಿ ಪ್ರವೇಶ ಪಡೆದಿರುವ ಬಡ ವಿದ್ಯಾರ್ಥಿಗಳನ್ನು ಶಾಲೆಯ ಪ್ರಾಂಶುಪಾಲರು ಬಲವಂತದಿಂದ ಹೊರಕಳುತ್ತಿರುವ ವಿಡಿಯೋ “ಪ್ರಜಾಕಹಳೆ” ಗೆ ಲಭ್ಯವಾಗಿದೆ.

ಬೈಚಾಪುರ ಉನ್ನತ್ತಿಕರಿಸಿದ ಮುರಾರ್ಜಿ ವಸತಿ ಶಾಲೆಯಲ್ಲಿನ ಮಕ್ಕಳ ಪೋಷಕರಿಂದ ಬಲವಂತ ದಿಂದ ಪತ್ರ ಬರೆಸಿಕೊಂಡು ಶಾಲೆಯಿಂದ ಹೊರ ಹಾಕುತ್ತಿರುವ ಪ್ರಾಂಶುಪಾಲರ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ವಸತಿ ಶಾಲೆಯಲ್ಲಿನ 6ನೇ ತರಗತಿಯಿಂದ 10 ನೇ ತರಗತಿಯವರಿಗಿನ ವಿದ್ಯಾರ್ಥಿಗಳನ್ನು ಮತ್ತು ಪದವಿ ಪೂರ್ವ ಕಾಲೇಜಿನ ಕೆಲ ವಿದ್ಯಾರ್ಥಿಗಳನ್ನು ಶಾಲೆ ಬಿಟ್ಟು ಬೇರೆಡೆಗೆ ಹೋಗದಿದ್ದರೆ ನಿಮ್ಮಮಕ್ಕಳನ್ನು ಫೇಲ್ ಮಾಡುತ್ತೇವೆ ಎಂದು ಹೆದರಿಸಿ ಬಲವಂತ ದಿಂದ ವಿದ್ಯಾರ್ಥಿಗಳ ಪೋಷಕರಿಂದ ಪತ್ರಗಳನ್ನು ಬರೆಸಿಕೊಳ್ಳಲಾಗುತ್ತಿದೆ.

ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆ ಮಾಡುತ್ತಿರುವ ಸದರಿ ಶಾಲೆಯ ಪ್ರಾಂಶುಪಾಲರ ವಿರುದ್ದ ಸೂಕ್ತ ಶಿಸ್ತು ಕ್ರಮ ಜರುಗಿಸಬೇಕೆಂಬ ಒತ್ತಾಯ ಕೇಳಿಬಂದಿದ್ದು, ಬಡವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಸದುದ್ದೇಶದಿಂದ ಸರ್ಕಾರ ಪ್ರಾರಂಭಿಸಿರುವ ವಸತಿ ಶಾಲೆಗಳಲ್ಲಿ ಬೆದರಿಕೆ ಹಾಕಿ ವಿದ್ಯಾರ್ಥಿಗಳನ್ನು ಹೊರಹಾಕುತ್ತಿರುವುದು ಬೆಳಕಿಗೆ ಬಂದಿದ್ದು, ಸರ್ಕಾರ ಇದಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕಾಗಿದೆ.
ಪ್ರಾಂಶುಪಾಲರಿಗೆ ನೋಟೀಸ್: ವಸತಿ ಶಾಲೆಯಲ್ಲಿನ ವಿದ್ಯಾರ್ಥಿಗಳನ್ನು ಬೆದರಿಕೆ ಹಾಕಿ ಹೊರಗೆ ಕಳುಹಿಸುತ್ತಿರುವ ಬೈಚಾಪುರ ವಸತಿ ಶಾಲೆಯ ಪ್ರಾಂಶುಪಾಲರಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡುವುದಾಗಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಅವರು ಪ್ರಜಾಕಹಳೆಗೆ ತಿಳಿಸಿದ್ದಾರೆ.