ತುಮಕೂರು: ದೇಶ ಕಂಡ ವಚನ ಭ್ರಷ್ಟ ಪ್ರಧಾನಿ ನರೇಂದ್ರ ಮೋದಿ ಅವರ ಸುಳ್ಳುಗಳಿಂದ ದೇಶ ಅಭಿವೃದ್ಧಿ ಸಾಧಿಸುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು ಮೋದಿ ಅವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನಲ್ಲಿ ದಲಿತರು, ಅಲ್ಪಸಂಖ್ಯಾತರು, ಮಹಿಳೆಯರಿಗೆ ಅವಕಾಶವಿಲ್ಲ, ಮೋದಿಜೀ ಸುಳ್ಳು ಹೇಳುತ್ತಿದ್ದಾರೆ, ದೇಶ ಕಂಡ ಪ್ರಧಾನಿಗಳಲ್ಲಿ ಅತಿ ಹೆಚ್ಚು ಸುಳ್ಳು ಹೇಳಿದ ಪ್ರಧಾನಿ ಮಿಸ್ಟರ್ ಮೋದಿಜೀ ಎಂದು ವ್ಯಂಗ್ಯವಾಡಿದರು.
ಸ್ವಾತಂತ್ರ್ಯ ಬಂದಾಗಿನಿಂದ ದೇಶದ ಮೇಲಿಂದ ಸಾಲ 53 ಲಕ್ಷ ಕೋಟಿ ಆದರೆ ಕಳೆದ 9 ವರ್ಷಗಳಲ್ಲಿ ಮೋದಿ 100 ಲಕ್ಷ ಕೋಟಿ ಸಾಲ ಮಾಡಿದ್ದಾರೆ, ರೈತರ ಆದಾಯ ದ್ವಿಗುಣಗೊಳ್ಳಲಿಲ್ಲ, ರೈತ ವಿರೋಧಿ ಕಾನೂನು ರೂಪಿಸಿದ್ದರ ವಿರುದ್ಧ ನಡೆದ ಪ್ರತಿಭಟನೆಗೆ ಮೋದಿ ನಡುಗಿ ವಾಪಾಸ್ ಪಡೆದರು ಎಂದರು.
ಅನ್ನಭಾಗ್ಯ 7 ಕೆಜಿಯಿಂದ 5 ಕೆಜಿಗೆ ತಂದಿದ್ದಾರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 10 ಕೆಜಿ ಕೊಡುತ್ತೇವೆ, ಕೇಂದ್ರ ಸರ್ಕಾರದ ಕಾರ್ಯಕ್ರಮವಾಗಿದ್ದರೆ ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶದಲ್ಲಿ ಏಕೆ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರು.
ಕಾಗೋಡು ತಿಮ್ಮಪ್ಪ ಕಂದಾಯ ಸಚಿವರಾಗಿದ್ದಾಗ ಮಾಡಿದ ಕೆಲಸವನ್ನು ಪ್ರಧಾನಿ ಮೋದಿ ಬಂದು ವಿತರಿಸಿದ್ದಾರೆ, ನಮ್ಮ ಸರ್ಕಾರ ಇದ್ದಾಗ ಮಾಡಿದ ಕಾನೂನಿನಿಂದ ಬಂಜಾರ, ಗೊಲ್ಲ ಸಮುದಾಯಗಳಿಗೆ ವಾಸಿಸುವವನೇ ಮನೆ ಒಡೆಯ ಯೋಜನೆ ತಂದಿದ್ದರಿಂದ ಇಂದು ಮೋದಿ ಹಕ್ಕು ಪತ್ರ ವಿತರಿಸಲು ಸಾಧ್ಯವಾಗಿದೆ, ಬಾಯಿ ಬಿಟ್ಟರೆ ಸುಳ್ಳು ಹೇಳುವ ಬಿಜೆಪಿಗರನ್ನು ನಮೋ ನಮೋ ಸತ್ಯ ಹೇಳ್ರಪ್ಪ ಅಂತ ಬಿಜೆಪಿಗರನ್ನು ಕೇಳಬೇಕಿದೆ ಎಂದು ಲೇವಡಿ ಮಾಡಿದರು.