ತುಮಕೂರು: ತುಮಕೂರು ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾಗಿ ಪಾವಗಡ ಶಾಸಕ ಹೆಚ್.ವಿ.ವೆಂಕಟೇಶ್ ಆಯ್ಕೆಯಾಗಿದ್ದಾರೆ. ಇಂದು ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಸರ್ಕಾರದ ನಾಮನಿರ್ದೇಶಿತ ಸದಸ್ಯರಾಗಿರುವ ಹೆಚ್.ವಿ.ವೆಂಕಟೇಶ್ ಹಾಗೂ ಸಿರಾ ತಾಲ್ಲೂಕು ಪ್ರತಿನಿಧಿಯಾದ ಆರ್.ಎಸ್.ಗೌಡ ನಾಮಪತ್ರ ಸಲ್ಲಿಸಿದ್ದರು.
ನಿಗದಿತ ಅವಧಿಯಲ್ಲಿ ಯಾರು ನಾಮಪತ್ರವನ್ನು ಹಿಂಪಡೆಯದ ಕಾರಣದಿಂದ ಚುನಾವಣಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಚುನಾವಣೆ ಪ್ರಕ್ರಿಯೆ ಮುಂದುವರೆಸಿದ್ದು ಶಾಸಕ ಹೆಚ್.ವಿ.ವೆಂಕಟೇಶ್ ಪರವಾಗಿ 09 ಮತಗಳು, ಎಸ್.ಆರ್.ಗೌಡ ಪರವಾಗಿ 05 ಮತಗಳು ಬಂದಿವೆ.
ತುಮುಲ್ ಅಧ್ಯಕ್ಷ ಸ್ಥಾನಕ್ಕೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಆಪ್ತ ತುಮುಲ್ ಮಾಜಿ ಅಧ್ಯಕ್ಷ ನಾಗೇಶ್ ಬಾಬು, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರ ಪತ್ನಿ ಭಾರತಿ, ತಿಪಟೂರು ತಾಲ್ಲೂಕಿನ ಮಾದಿಹಳ್ಳಿ ಪ್ರಕಾಶ್ ನಡುವೆ ತೀವ್ರ ಪೈಪೋಟಿ ಏರ್ಪಡಿದ್ದ ಹಿನ್ನೆಲೆಯಲ್ಲಿ ಅನಿರೀಕ್ಷಿತ ಬೆಳವಣಿಗೆಯಲ್ಲಿ ಶಾಸಕ ಹೆಚ್.ವಿ.ವೆಂಕಟೇಶ್ ಅವರನ್ನು ಸರ್ಕಾರ ನಾಮನಿರ್ದೇಶಿತ ಸದಸ್ಯನಾಗಿ ನೇಮಕ ಮಾಡಿತ್ತು.