ನಿವೃತ್ತ ನೌಕರನಿಗೆ 40 ಲಕ್ಷ ವಂಚಿಸಿದ ಪಾವಗಡ ಸೌಹಾರ್ದ ಬ್ಯಾಂಕ್

ಡೆಸ್ಕ್
1 Min Read

ತುಮಕೂರು: ಬಿಎಸ್ ಎನ್ಎಲ್ ನಿವೃತ್ತ ನೌಕರನಿಗೆ ಪಾವಗಡ ಸೌಹಾರ್ದ ಮಲ್ಟಿ ಪರ್ಪಸ್ ಕೋ ಆಪರೇಟಿವ್ ಲಿಮಿಟೆಡ್ ಸಂಸ್ಥೆ 40 ಲಕ್ಷಕ್ಕೂ ಹೆಚ್ಚು ಹಣವನ್ನು ವಂಚನೆ ಮಾಡಿರುವ  ಬಗ್ಗೆ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಗೋಕುಲ ಬಡಾವಣೆಯ ನಿವಾಸಿಯಾದ ನಾರಾಯಣಪ್ಪ ಎನ್ ಎಂಬುವರು ಬಿಎಸ್ ಎನ್ ಎಲ್ ಉದ್ಯೋಗಿಯಾಗಿದ್ದು ನಿವೃತ್ತಿ ನಂತರ ಬಂದ ಹಣವನ್ನು ಪಾವಗಡ ಸೌಹಾರ್ದ ಮಲ್ಟಿ ಪರ್ಪಸ್ ಕೋ ಆಪರೇಟಿವ್ ಲಿಮಿಟೆಡ್ ಸಂಸ್ಥೆಯಲ್ಲಿ ಮಗನ ಹೆಸರಿನಲ್ಲಿ ಠೇವಣಿ ಇಟ್ಟಿದ್ದು, ಸದರಿ ಬಾಂಡ್ ಮೇಲೆ ಯಾವುದೇ ಸಾಲವನ್ನು ಪಡೆಯದೇ ಇದ್ದರೂ ಸಹ ಸಾಲ ಪಡೆದಿರುವುದಾಗಿ ದಾಖಲೆಗಳನ್ನು ಸೃಷ್ಠಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಪತ್ನಿ ಹೆಸರಿನಲ್ಲಿ ಸದರಿ ಬ್ಯಾಂಕ್ ನಲ್ಲಿ ಖಾತೆ ತೆರಯುವ ಮುಂಚೆಯೇ 7,50 ಲಕ್ಷ ಸಾಲ ಪಡೆದಿರುವುದಾಗಿ ದಾಖಲೆಗಳನ್ನು ಸೃಷ್ಟಿಸಿದ್ದು, ಠೇವಣಿ ಇಟ್ಟಿದ್ದ ಹಣವನ್ನು ವಾಪಾಸ್ ಕೊಡದೇ ಸಾಲಕ್ಕೆ ಜಮಾ ಮಾಡಲಾಗಿದೆ, 3,50 ಲಕ್ಷ ರೂ ಬ್ಯಾಂಕಿಗೆ ಜಮಾ ಮಾಡಿದ ರಸೀದಿ ಇದ್ದರು ಸಹ ಬ್ಯಾಂಕ್ ವ್ಯವಸ್ಥಾಪಕರು 12 ಲಕ್ಷದ 21 ಸಾವಿರವನ್ನು ವಂಚಿಸಿ ಸ್ವಂತಕ್ಕೆ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪಾವಗಡ ಸೌಹಾರ್ದ ಮಲ್ಟಿ ಪರ್ಪಸ್ ಕೋ ಆಪರೇಟಿವ್ ಲಿಮಿಟೆಡ್ ಸಂಸ್ಥೆಯ ವಿವಿಧ ಶಾಖೆಗಳಲ್ಲಿ ನಾರಾಯಣಪ್ಪ.ಎನ್ ಹಾಗೂ ಪತ್ನಿ ಪುಷ್ಪ, ಮಗ ಶ್ರೀನಿಧಿ ಹೆಸರಿನಲ್ಲಿ ಠೇವಣಿ ಇಟ್ಟ ಹಣವನ್ನು ಬ್ಯಾಂಕ್ ಮ್ಯಾನೇಜಿಂಗ್ ಡೈರೆಕ್ಟರ್ ಆದ ಕೃಷ್ಣಾರೆಡ್ಡಿ ಹಾಗೂ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಬ್ಯಾಂಕ್ ವ್ಯವಸ್ಥಾಪಕರು ಖಾತೆದಾರರ ಗಮನಕ್ಕೆ ತರದೇ 40,20,580 ರೂಗಳನ್ನು ವಂಚಿಸಿದ್ದಾರೆ ಎಂದು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

Share this Article
Verified by MonsterInsights