ತುಮಕೂರು: ಬಾಂಬ್ ಇಡುವವರು, ಪಾಕಿಸ್ತಾನ್ ಜಿಂದಾಬಾದ್ ಎನ್ನುವವರನ್ನು ಕಾಂಗ್ರೆಸ್ ಸೋದರರಂತೆ ನೋಡಿಕೊಳ್ಳುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.
ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ನಡೆದ ದೇಶಭಕ್ತರ ಸಮ್ಮೀಲನದಲ್ಲಿ ಮಾತನಾಡಿದ ಅವರು, ಭಾರತದ ಅನ್ನ ತಿಂದು ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗುವವರನ್ನು ಕಾಂಗ್ರೆಸ್ನವರು ಮತ ಬ್ಯಾಂಕ್ ಮಾಡಿಕೊಂಡಿದ್ದಾರೆ, ಇವರಿಂದ ದೇಶ ರಕ್ಷಣೆ ಸಾಧ್ಯವೆ? ಎಂದು ಪ್ರಶ್ನಿಸಿದರು.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದಾರಾಮಯ್ಯ ಅವರು ಮುಂದಿನ ಜನ್ಮ ಅಂತ ಇದ್ದರೆ ನಾನು ಮುಸ್ಲೀಂ ಆಗಿ ಹುಟ್ಟಲು ಬಯಸುತ್ತೇನೆ ಎಂದು ಹೇಳಿದ್ದರು. ಮುಂದಿನ ಜನ್ಮದವರೆಗೂ ಯಾಕೆ ಕಾಯುವಿರಿ, ಈಗಲೇ ಆ ಧರ್ಮಕ್ಕೆ ಮತಾಂತರವಾಗಿರಿ ಯಾರು ಬೇಡ ಎಂದಿದ್ದಾರೆ ಎಂದು ಸಿ.ಟಿ.ರವಿ ವ್ಯಂಗ್ಯವಾಡಿದರು.
ನೀವೆಲ್ಲಾ ಮೋದಿ ವಾರಿಯರ್ಸ್ ಆಗಿ ಸೈನಿಕರಂತೆ ದೇಶ ರಕ್ಷಣೆ ಮಾಡುವ ಸಂಕಲ್ಪ ಮಾಡಬೇಕು. ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋಮಣ್ಣ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ರಾಜಕಾರಣದಲ್ಲಿ ಕೆಟ್ಟ ಕಾಲ, ಒಳ್ಳೆಯ ಕಾಲ ಅಂತ ಇರುತ್ತದೆ. ಸೊಗಡು ಶಿವಣ್ಣನವರಿಗೆ ಕೆಟ್ಟ ಕಾಲ ಮುಗಿದು ಈಗ ಒಳ್ಳೆಯ ಕಾಲ ಬಂದಿದೆ, ಇನ್ನು ಮುಂದೆ ಇವರು ಪಕ್ಷ ಹಾಗೂ ದೇಶ ಕಟ್ಟುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲಿ ಎಂದು ಶುಭ ಕೋರಿದರು.