ಸಂಘಟಿತ ಹೋರಾಟ ಕಾಂಗ್ರೆಸ್ ಗೆಲುವಿಗೆ ಕಾರಣ

ತುಮಕೂರು: ತುಮಕೂರು ಜಿಲ್ಲೆಯ 11 ಕ್ಷೇತ್ರಗಳಲ್ಲಿ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭರ್ಜರಿಯಾಗಿ ಗೆಲುವು ಸಾಧಿಸುವ ಮೂಲಕ ಗೆಲುವಿನ ದಡ ಸೇರಿದೆ.

2018ರಲ್ಲಿ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಈ ಬಾರಿ ಸಂಘಟಿತ ಹೋರಾಟ ಮಾಡುವ ಮೂಲಕ 7 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಸ್ವಲ್ಪ ಪ್ರಯತ್ನ ಹೆಚ್ಚಿಸಿದ್ದರು ಇನ್ನೆರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಅವಕಾಶವನ್ನು ಕೈ ಚೆಲ್ಲಿಕೊಂಡಿದೆ.

ತುಮಕೂರು ನಗರದಲ್ಲಿ ಅದ್ದೂರಿ ಪ್ರಚಾರವಿಲ್ಲದೆ, ಸಾಂಪ್ರದಾಯಿಕ ಮತಗಳನ್ನೇ ನೆಚ್ಚಿಕೊಂಡಿದ್ದ ಇಕ್ಬಾಲ್ ಅಹಮದ್  9 ಸಾವಿರ ಮತಗಳಲ್ಲಿ  ಅಂತರದಲ್ಲಿ ಸೋಲು ಕಂಡಿದ್ದಾರೆ. 44,845 ಮತಗಳನ್ನು ಪಡೆದರೆ ಜ್ಯೋತಿಗಣೇಶ್ 53938 ಮತಗಳನ್ನು ಪಡೆದಿದ್ದಾರೆ.

ಚಿಕ್ಕನಾಯಕನಹಳ್ಳಿಯಲ್ಲಿ ಬಿಜೆಪಿಯಿಂದ ಪಕ್ಷಾಂತರಗೊಂಡು ಸ್ಪರ್ಧಿಸಿದ್ದ ಕೆ.ಎಸ್.ಕಿರಣ್ ಕುಮಾರ್ ಅವರು  50996 ಮತಗಳನ್ನು ಪಡೆದಿದ್ದು, ಗೆದ್ದಿರುವ ಜೆಡಿಎಸ್ ನ ಸುರೇಶ್ ಬಾಬು 71036 ಮತಗಳನ್ನು ಪಡೆದಿದ್ದಾರೆ.

ಮಧುಗಿರಿ ಉಪವಿಭಾಗದಲ್ಲಿಕೈ ಕಮಾಲ್: ಮಧುಗಿರಿ ಉಪವಿಭಾಗದಲ್ಲಿನ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕಮಾಲ್ ಮಾಡಿದೆ, ಮಧುಗಿರಿ, ಪಾವಗಡ, ಸಿರಾ, ಕೊರಟಗೆರೆಯಲ್ಲಿ ಭಾರೀ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್ ಮುಖಂಡರಾದ ಕೆ.ಎನ್.ರಾಜಣ್ಣ, ಡಾ.ಜಿ.ಪರಮೇಶ್ವರ್, ಟಿ.ಬಿ.ಜಯಚಂದ್ರ ಅವರು ಸಂಘಟಿತರಾಗಿ ಚುನಾವಣೆಯನ್ನು ಎದುರಿಸಿದ್ದು, ಕಾರ್ಯಕರ್ತರನ್ನು ಹುರಿದುಂಬಿಸಿದ್ದರ ಪರಿಣಾಮವಾಗಿ ಏಳು ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ದಾಖಲೆ ನಿರ್ಮಿಸಿದೆ.

Verified by MonsterInsights