ಜೆಡಿಎಸ್ ತೊರೆದಿರುವ ಮಾಜಿ ಸಚಿವ, ಶಾಸಕ ಎಸ್.ಆರ್.ಶ್ರೀನಿವಾಸ್ (S.R.SRINIVAS) ಅವರನ್ನು ಸೋಲಿಸಲು ರಾಜಕೀಯ ವಿರೋಧಿಗಳೆಲ್ಲ ಒಂದಾದರೆ ಎನ್ನುವ ಚರ್ಚೆ ಗುಬ್ಬಿಯಲ್ಲಿ ಭುಗಿಲೆದ್ದಿದೆ.
ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿ ಜಿ.ಎನ್.ಬೆಟ್ಟಸ್ವಾಮಿಗೆ ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ, ಮಾತೃಪಕ್ಷದತ್ತ ಹೊರಳಿದ್ದಾರೆ ಎನ್ನಲಾಗಿದ್ದು, ಜೆಡಿಎಸ್ ಸೇರ್ಪಡೆ ಬಗ್ಗೆ ಜೆಡಿಎಸ್ ವರಿಷ್ಠ ಕುಮಾರಸ್ವಾಮಿ (HD KUMARASWAMY) ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಜೆಡಿಎಸ್ ನಲ್ಲಿ ಗಳಸ್ಯ ಕಂಠಸ್ಯರಾಗಿದ್ದ ಬೆಟ್ಟಸ್ವಾಮಿ (G.N.BETTASWAMY) ಹಾಗೂ ಎಸ್.ಆರ್.ಶ್ರೀನಿವಾಸ್ ನಂತರ ದೂರವಾಗಿದ್ದರು, ಜೆಡಿಎಸ್ ತೊರೆದಿದ್ದ ಬೆಟ್ಟಸ್ವಾಮಿ ಬಿಜೆಪಿ ಸೇರ್ಪಡೆಯಾಗಿ ಎರಡು ಬಾರಿ ಸ್ಪರ್ಧಿಸಿ ಕೆಲವೇ ಮತಗಳ ಅಂತದಿಂದ ಸೋಲನ್ನಪ್ಪಿದ್ದರು. ಈಗ ಬಿಜೆಪಿ ಟಿಕೆಟ್ ಕೈ ತಪ್ಪಿದ್ದರಿಂದ ಜೆಡಿಎಸ್ ನತ್ತ ಮುಖ ಮಾಡಿದ್ದಾರೆ.
ಗುಬ್ಬಿಯಲ್ಲಿ ಸತತ ನಾಲ್ಕು ಬಾರಿ ಶಾಸಕರಾಗಿರುವ ಎಸ್.ಆರ್.ಶ್ರೀನಿವಾಸ್ ಅವರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಲು ರಾಜಕೀಯ ವಿರೋಧಿಗಳ ಧ್ರುವೀಕರಣ ಆಗುತ್ತಿದ್ದು, ಮೊದಲಿನಿಂದಲೂ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದ ಹೊನ್ನಗಿರಿಗೌಡ (HONNAGIRIGOWDA)ಸಹ ಜೆಡಿಎಸ್ ಪಾಳಯ ಸೇರಲಿದ್ದಾರೆ.
ಗುಬ್ಬಿಯಲ್ಲಿ ಎಸ್.ಆರ್.ಶ್ರೀನಿವಾಸ್ ಗೆ ಟಕ್ಕರ್ ಕೊಡಲು ರೆಡಿಯಾಗಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ಶ್ರೀನಿವಾಸ್ ವಿರೋಧಿಗಳನ್ನು ಪಕ್ಷಕ್ಕೆ ಸೆಳೆಯುವ ಮೂಲಕ ಪಕ್ಷವನ್ನು ಬಲಗೊಳಿಸುತ್ತಿದ್ದು, ಕಾಂಗ್ರೆಸ್ ನ ಅಸಮಾಧಾನಿತರಿಗೆ ಗಾಳ ಹಾಕಲಾಗಿದೆ ಎನ್ನುವ ಮಾಹಿತಿ ಹೊರಬಂದಿದೆ.