ನರೇಗಾ:ಗರ್ಭಿಣಿ,ಬಾಣಂತಿಯರಿಗೆ ಕೆಲಸದಲ್ಲಿ ಶೇ.50ರಷ್ಟು ರಿಯಾಯಿತಿ

ಗಿರೀಶ್
1 Min Read

ತುಮಕೂರು:ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಗರ್ಭಿಣಿಯರು
ಹಾಗೂ ಬಾಣಂತಿಯರಿಗೆ ಕೆಲಸದ ಪ್ರಮಾಣದಲ್ಲಿ ಶೇ.50ರಷ್ಟು ರಿಯಾಯಿತಿ
ನೀಡಲಾಗಿದ್ದು, ಗ್ರಾಮೀಣ ಪ್ರದೇಶದ ಮಹಿಳೆಯರು ಈ ಸೌಲಭ್ಯವನ್ನು
ಸದ್ಬಳಕೆ ಮಾಡಿಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ
ಅಧಿಕಾರಿಗಳಾದ ಡಾ.ಕೆ.ವಿದ್ಯಾಕುಮಾರಿ ಮನವಿ ಮಾಡಿದ್ದಾರೆ.

ಈಗಾಗಲೇ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ವಿಶೇಷ ಚೇತನರು
ಹಾಗೂ ಹಿರಿಯ ನಾಗರೀಕರಿಗೆ ಒಂದು ದಿನದ ಕೆಲಸದ ಪ್ರಮಾಣದಲ್ಲಿ ಶೇ.50
ರಷ್ಟು ರಿಯಾಯಿತಿ ಇದ್ದು, ಪ್ರಸ್ತುತ ನರೇಗಾ ಯೋಜನೆಯಡಿ ಮಹಿಳೆಯರ
ಭಾಗವಹಿಸುವಿಕೆ ಪ್ರಮಾಣವು ಶೇ.51ರಷ್ಟು ಇರುತ್ತದೆ. ಮಹಿಳಾ
ಭಾಗವಹಿಸುವಿಕೆ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಹಾಗೂ ಮಹಿಳೆಯರು
ನರೇಗಾ ಕಾಮಗಾರಿಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವ ಸಲುವಾಗಿ
ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಕೆಲಸದ ಪ್ರಮಾಣದಲ್ಲಿ ರಿಯಾಯಿತಿ
ನೀಡಲಾಗಿದೆ ಎಂದು ತಿಳಿಸಿದ್ದಾರೆ.

ನರೇಗಾ ಯೋಜನೆಯ ಕಾಮಗಾರಿಗಳಲ್ಲಿ ಗರ್ಭಿಣಿಯರು ಮತ್ತು
ಬಾಣಂತಿಯರು ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದು, ಅವರುಗಳ
ದೈಹಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಕೆಲಸದ
ಪ್ರಮಾಣದಲ್ಲಿ ರಿಯಾಯಿತಿ ನೀಡುತ್ತಿದೆ. ನರೇಗಾ ಯೋಜನೆಯ ಕಾಮಗಾರಿಗಳಲ್ಲಿ
ಕೆಲಸ ನಿರ್ವಹಿಸುವ 6 ತಿಂಗಳು ತುಂಬಿದ ಗರ್ಭಿಣಿಯರಿಗೆ ಮಗುವಿನ
ಜನನದವರೆಗೆ ಹಾಗೂ ಬಾಣಂತಿಯರಿಗೆ ಮಗುವಿನ ಜನನ ದಿನಾಂಕದಿಂದ 6
ತಿಂಗಳವರೆಗೆ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನಿಗಧಿತ ಕೂಲಿ
ಪಡೆಯಲು ನಿಗಧಿಪಡಿಸಲಾದ ಕೆಲಸದ ಪ್ರಮಾಣದಲ್ಲಿ ಶೇ.50ರಷ್ಟು ರಿಯಾಯಿತಿ
ನೀಡಲಾಗಿದೆ.ಈ ರಿಯಾಯಿತಿ ಪಡೆಯಲು ಆರೋಗ್ಯ ಇಲಾಖೆಯು ನೀಡುವ ತಾಯಿ
ಕಾರ್ಡನ್ನು ಆಧಾರವಾಗಿ ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ.

ಉಚಿತ ಸಹಾಯವಾಣಿ:ಮಹಾತ್ಮಗಾಂಧಿ ನರೇಗಾ ಯೋಜನೆಯ ಜಲ ಸಂಜೀವಿನಿ
ಕಾರ್ಯಕ್ರಮದಡಿ ವೈಜ್ಞಾನಿಕವಾಗಿ ಸ್ಥಳಗಳನ್ನು ಗುರ್ತಿಸಿ ಜಿಯೋ-
ಸ್ಪೇಷಿಯಲ್ ತಂತ್ರಜ್ಞಾನಗಳನ್ನು ಬಳಸಿಕೊಂಡು ಸ್ಥಳಕ್ಕೆ ಅನುಗುಣವಾಗಿ
ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ಕಾಮಗಾರಿಗಳನ್ನು ಅನುಷ್ಟಾನಗೊಳಿಸಲು
ಈಗಾಗಲೇ ಜಿಲ್ಲಾ ಮಟ್ಟದ ಮಾಸ್ಟರ್ ತರಬೇತುದಾರರಿಗೆ ಹಾಗೂ ಕ್ಷೇತ್ರ
ಮಟ್ಟದ ಅಧಿಕಾರಿ,ಸಿಬ್ಬಂದಿಗಳಿಗೆ ಸಾಮರ್ಥ್ಯಾಭಿವೃದ್ದಿ ತರಬೇತಿಗಳನ್ನು
ಒದಗಿಸಿದ್ದು,ಕ್ಷೇತ್ರಮಟ್ಟದಲ್ಲಿ ಈಗಾಗಲೇ ತಂತ್ರಜ್ಞಾನವನ್ನು
ಉಪಯೋಗಿಸಿಕೊಂಡು ವಿಸ್ತೃತ ಯೋಜನಾ ವರದಿಯನ್ನು ತಯಾರಿಸುತ್ತಿದ್ದು,
ಈ ವಿಷಯವಾಗಿ ಮಾರ್ಗದರ್ಶನ, ಮಾಹಿತಿ ಕೊರತೆ ಕಂಡು ಬಂದಲ್ಲಿ ಮತ್ತು
ಉತ್ತಮ ಅನುಷ್ಟಾನಕ್ಕಾಗಿ ಜಲ ಸಂಜೀವಿನಿ ಸಹಾಯವಾಣಿ ಸಂಖ್ಯೆ: 080-22372738 ಗೆ
ಕರೆ ಮಾಡುವ ಮೂಲಕ ಸಹಾಯವಾಣಿಯನ್ನು ಸದ್ಬಳಕೆ
ಮಾಡಿಕೊಳ್ಳುವಂತೆ ಸಿಇಓ ಡಾ.ಕೆ.ವಿದ್ಯಾಕುಮಾರಿ ಕೋರಿದ್ದಾರೆ.

Share this Article
Verified by MonsterInsights