ಆಂಧ್ರ, ಮಹಾರಾಷ್ಟ್ರಕ್ಕಿಲ್ಲ ತುಮುಲ್ ಹಾಲು: ಸಿ.ವಿ.ಮಹಾಲಿಂಗಯ್ಯ

ಡೆಸ್ಕ್
2 Min Read

ತುಮಕೂರು: ಆಂಧ್ರ, ಮಹಾರಾಷ್ಟ್ರ ಸೇರಿದಂತೆ ಹೊರರಾಜ್ಯಗಳಿಗೆ ತುಮುಲ್ ಹಾಲು ಬೇಡಿಕೆಗೆ ತಕ್ಕಂತೆ ಪೂರೈಸಲು ಆಗುತ್ತಿಲ್ಲ ಎಂದು ತುಮುಲ್ ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ ತಿಳಿಸಿದರು.

ತುಮಕೂರು ಹಾಲು ಒಕ್ಕೂಟದ ಕಹಾಮ ಸಂಜೀವಿನಿ ಯೋಜನೆಯಡಿ ಮಹಿಳೆಯರಿಗೆ ತರಬೇತಿ ಉದ್ಘಾಟಿಸಿ ಮಾತನಾಡಿದ ಅವರು, ಬಾಂಬೆಗೆ ಪ್ರತಿನಿತ್ಯ 2 ಲಕ್ಷದ 10 ಸಾವಿರ ಲೀಟರ್ ಹಾಲು ಮಾರಾಟವಾಗುತ್ತಿದೆ.ಅಲ್ಲಿ ಇನ್ನೂ ಬೇಡಿಕೆ ಇದೆ.ಆದರೆ ಈ ವರ್ಷ ಹಾಲು ಉತ್ಪಾದನೆಯಲ್ಲಿ ಕುಂಠಿತವಾಗಿರುವ ಕಾರಣ ನಿರೀಕ್ಷಿತ ಬೇಡಿಕೆಗೆ ತಕ್ಕಂತೆ ಹಾಲು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.

ಹೊರ ರಾಜ್ಯಗಳಿಂದಲೂ ನಂದಿನಿ ಹಾಲಿಗೆ ಬೇಡಿಕೆ ಇದ್ದು,ಬೇಡಿಕೆಗೆ ತಕ್ಕಂತೆ ಹಾಲು ಪೂರೈಕೆ ಯಾಗುತ್ತಿಲ್ಲ, ಬೆಂಬಲ ಬೆಲೆ ನೀಡಿದರು ಸಹ ಹಾಲಿನ ಉತ್ಪಾದನೆ ಹೆಚ್ಚಳವಾಗುತ್ತಿಲ್ಲ ಎಂದರು.

ಆಂಧ್ರ, ಜಮ್ಮು ಕಾಶ್ಮೀರ ಹೀಗೆ ಹೊರ ರಾಜ್ಯಗಳಿಗೆ ಇಲ್ಲಿನ ಹಾಲು ಸರಬರಾಜಾಗುತ್ತಿದೆ. ಕಳೆದ ಬಾರಿ ಇದೇ ಸಂದರ್ಭದಲ್ಲಿ 80 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು.ಈ ವರ್ಷ 7 ಲಕ್ಷದ 20 ಸಾವಿರ ಲೀಟರ್ ನಿತ್ಯ ಹಾಲು ಪೂರೈಕೆ ಯಾಗುತ್ತಿದೆ.ಇನ್ನೂ ಹೆಚ್ಚಳವಾಗಲು ರೈತರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಈ ವರ್ಷದಲ್ಲಿ 2 ಬಾರಿ ಪ್ರತ್ಯೇಕವಾಗಿ 2.50 ರೂ.ಗಳನ್ನು ರೈತರಿಗೆ ಹೆಚ್ಚಳ ಮಾಡಲಾಗಿದೆ ಎಂದು ಮಹಾಲಿಂಗಯ್ಯ ತಿಳಿಸಿದರು.

ಒಂದು ಕೆ.ಜಿ.ಹಾಲಿನ ಪೌಡರ್ ಮಾಡಲು 40 ರಿಂದ 50 ರೂ.ಗಳಷ್ಟು ನಷ್ಟವಾಗುತ್ತಿದೆ.ಈ ಕಾರಣಕ್ಕಾಗಿ ಹೊರ ಜಿಲ್ಲೆಗಳಿಗೆ ಕ್ಷೀರಭಾಗ್ಯ ಯೋಜನೆಯಡಿ ಪೌಡರ್ ಸರಬರಾಜು ಸ್ಥಗಿತಗೊಳಿಸಿ ನಮ್ಮ ಜಿಲ್ಲೆಗೆ ಮಾತ್ರ ನೀಡಬೇಕೆಂಬ ಚಿಂತನೆ ನಡೆದಿದೆ. ಹೈನುಗಾರಿಕೆ ಮೂಲಕ ಗ್ರಾಮೀಣ ಸಮುದಾಯ ಬದುಕು ಕಟ್ಟಿಕೊಳ್ಳಲು ಸಾಧ್ಯವಿದ್ದು, ರಾಸು ಖರೀದಿಸುವ ಮಹಿಳೆಯರಿಗೆ 25 ಸಾವಿರ ರೂ.ಗಳ ಪ್ರೋತ್ಸಾಹ ಧನ ನೀಡಲಾಗುತ್ತಿದೆ.ಇದನ್ನು ಬಡ್ಡಿಯಿಲ್ಲದೆ ತೀರುವಳಿ ಮಾಡುವ ವ್ಯವಸ್ಥೆ ಇದೆ ಎಂದು ಒಕ್ಕೂಟದ ಅಧ್ಯಕ್ಷರು ನುಡಿದರು.

ಒಕ್ಕೂಟದ ಉಪ ವ್ಯವಸ್ಥಾಪಕ ಚಂದ್ರಶೇಖರ ಕೆದನೂರಿ ಮಾತನಾಡಿ,ಅತಿವೃಷ್ಠಿ ಹಾಗೂ ಹಸುಗಳಿಗೆ ಚರ್ಮರೋಗ, ಗಂಟು ರೋಗ ಎದುರಾದ ಕಾರಣ ಹಾಲಿನ ಉತ್ಪಾದನೆಯಲ್ಲಿ ಕುಂಠಿತವಾಗಿದೆ. ಕೆಲವು ದಿನಗಳ ನಂತರ ಸರಿಹೋಗಲಿದೆ ಎಂದ ಅವರು, ಶುದ್ಧ ಹಾಲು ಉತ್ಪಾದನೆಗೆ ಏನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಮಾಹಿತಿ ನೀಡಿದರು.

ಆರೋಗ್ಯ ಮತ್ತು ಮಹಿಳೆ ಕುರಿತು ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಪ್ಪ ಮಾನಾಡಿ,ಮಹಿಳೆಯರಿಗೆ ಕ್ಯಾನ್ಸರ್‌ನಂತಹ ಕಾಯಿಲೆಗಳು ಹೆಚ್ಚು ಬಾಧಿಸುತ್ತಿದ್ದು, ನಿರ್ಲಕ್ಷ್ಯ ವಹಿಸದೆ ಸಮೀಪದ ಆರೋಗ್ಯ ಕೇಂದ್ರಗಳನ್ನು ಭೇಟಿ ಮಾಡಬೇಕೆಂದರು.

ತುಮಕೂರು ಹಾಲು ಒಕ್ಕೂಟದ ಕಹಾಮ ಸಂಜೀವಿನಿ ಯೋಜನೆಯಡಿ ಮಹಿಳೆಯರಿಗೆ ತರಬೇತಿ ನೀಡಲಾಯಿತು

ಕಾನೂನು ಮತ್ತು ಮಹಿಳೆ ಕುರಿತು ತುಮಕೂರು ಸಾಂತ್ವನ ಕೇಂದ್ರದ ಸಲಹೆಗಾರ ಸಾ.ಚಿ.ರಾಜಕುಮಾರ, ಕಾರ್ಯಕ್ರಮದ ಉದ್ದೇಶ ಕುರಿತು ಸ್ಟೆಫ್ ಯೊಜನೆ ಅಧಿಕಾರಿ ವೈ.ಎಸ್.ಮಧು ಮಾತನಾಡಿದರು. ಸಮಾರಂಭದಲ್ಲಿ ಸ್ಥಳೀಯ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಜಯಮ್ಮ, ಕಾರ್ಯದರ್ಶಿ ಶೀಲ, ವಿಸ್ತರಣಾಧಿಕಾರಿಗಳಾದ ಭವ್ಯ, ದಿವಾಕರ, ಬಸವರಾಜು, ಶಿವಪ್ಪ, ಮುಖಂಡರುಗಳಾದ ರಂಗಸ್ವಾಮಿ, ಮೂಡಲಗಿರಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.

Share this Article
Verified by MonsterInsights