ಮಾಂಡೋಸ್ ಜಡಿಮಳೆಯಿಂದ ಈ ಭಾಗದ ವಾಣಿಜ್ಯ ಬೆಳೆಯಾದ ರಾಗಿ ತೆನೆ ಕೊಯ್ಲು ಅಡ್ಡಿಯಾಗಿದೆ. ಪರಿಣಾಮ ಕೈಗೆ ಬಂದ ತುತ್ತು ಬಾಯಿಗೆ ಬರುವ ಮುಂಚೆ ರೈತರನ್ನು ಆತಂಕಕ್ಕೆ ದೂಡಿದೆ.
ಈ ವರ್ಷ ದಾಖಲೆ ಮಳೆಯಾಗಿ ಕೆರೆ-ಕುಂಟೆ, ಕಾಲುವೆಗಳಲ್ಲಿ ನೀರು ತುಂಬಿ ಹರಿದ ಪರಿಣಾಮ ಬಂಪರ್ ರಾಗಿ ಬೆಳೆ ಬಂದಿದೆ. ಹೊಲಗಳಲ್ಲಿ ಕೊಯ್ಲಿಗೆ ಬಂದಿರುವ ರಾಗಿ, ಸಾವೆ, ನವಣೆ, ಇತರ ಬೆಳೆಗಳ ಪೈರು ಒಣಗಿ ನಿಂತಿವೆ. ಪರಿಣಾಮ ಕಳೆದ ಹತ್ತದಿನೈದು ದಿನಗಳಿಂದ ಬೆಳೆ ಕಟಾವು ಕಾರ್ಯ ಭರದಿಂದ ಸಾಗುತ್ತಿತ್ತು. ಕಳೆದ ವರ್ಷದಂತೆ ಈ ವರ್ಷವೂ ಮಳೆ ಬಿದ್ದು ಕಷ್ಟಪಟ್ಟು ಬೆಳೆದ ಬೆಳೆಯು ಹಾಳಾಗಬಹುದೆಂಬ ಭೀತಿಯಿಂದ ರೈತರು ಆಧುನಿಕ ಯಂತ್ರಗಳ ಮೊರೆ ಹೋಗಿದ್ದರು.
ದುರಾದೃಷ್ಟವಶತ್ ಕಳೆದ ವರ್ಷದಂತೆ ಈ ವರ್ಷವೂ ವಾಯುಭಾರ ಕುಸಿತದಿಂದ ಕಳೆದ ಎರಡು ದಿನಗಳಿಂದ ಜಡಿಮಳೆ ಸುರಿಯುತ್ತಿದೆ. ಬಿಸಿಲಿಲ್ಲದೆ ಮೋಡಮುಸುಕಿದ ವಾತಾವರಣ, ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಫಸಲಿಗೆ ಬಂದಿದ್ದ ರಾಗಿ ತೆನೆಯೂ ಮಾಗಿ ನೆಲಕ್ಕೆ ಬೀಳುತ್ತಿವೆ. ಶೀತದ ವಾತವರಣ ಹಾಗೂ ತೇವಾಂಶದಿಂದಾಗಿ ತೆನೆಗೆ ಫಂಗಸ್ ಆಗಿ ಮೊಳಕೆಯೊಡೆಯುವ ಬೀತಿ ಎದುರಾಗಿದೆ. ಒಣಗಿರುವ ರಾಗಿ ಮಳೆ ನೀರಿಗೆ ನೆನೆದು ತೆನೆ ಹಾಗೂ ರಾಗಿ ಎರಡೂ ಕಪ್ಪಾಗುತ್ತಿವೆ. ಪರಿಣಾಮ ಹೊಲದಲ್ಲಿ ರಾಗಿ ತೆನೆ ರಾಶಿ ಹಾಕಿ ಪ್ಲಾಸ್ಟಿಕ್ ಹಾಳೆಯಿಂದ ಮುಚ್ಚಲು, ಅರಿ ಕಟ್ಟಲು ಹಾಗೂ ಕಟ್ಟಿದ ಕಟ್ಟು ನೆನೆಯದಂತೆ ಉಡ್ಡೆ ಮಾಡಲು ರೈತರ ಪರದಾಡುತ್ತಿರುವ ದೃಶ್ಯ ಈಗ ಹೊಲದಲ್ಲಿ ಸಾಮಾನ್ಯವಾಗಿದೆ.
ಇವೆಲ್ಲದರ ನಡುವೆ ಕೊಯ್ಲು ಮಾಡಿ ಒಕ್ಕಣೆಯೂ ಮುಗಿಸಿದ ರೈತರು ದವಸಧಾನ್ಯವನ್ನು ಒಣಗಿಸಲು ಮೋಡ ಮುಸುಕಿದ ವಾತಾವರಣ ಹಾಗೂ ಆಗಾಗ ಸುರಿಯುವ ತುಂತುರು ಮಳೆ ಅಡ್ಡಿಯಾಗಿ ರೈತರನ್ನು ಕಂಗೆಡಿಸಿದೆ.
ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಚಂಡಮಾರುತ ರಾಗಿ ಕೊಯ್ಲಿಗೆ ಅಡ್ಡಿಯಾಗಿದೆ. ಕೃಷಿ ಕಾರ್ಮಿಕರ ಕೊರತೆಯಿಂದ ಕಟಾವು ಯಂತ್ರದಿಂದ ಕೊಯ್ಲು ಮಾಡಿಸಲು ಸಿದ್ಧತೆ ನಡೆಸಿದ್ದೆವು. ಆದರೆ, ಮೋಡಕವಿದ ವಾತಾವರಣದೊಂದಿಗೆ ಮಳೆ ಬೀಳುತ್ತಿರುವುದರಿಂದ ಬೆಳೆಯ ಕೊಯ್ಲು ಸಾಧ್ಯವಾಗುತ್ತಿಲ್ಲ. ಇನ್ನೂ 3 ದಿನ ಮಳೆ ಬೀಳುವ ಸಾಧ್ಯತೆ ಇರುವುದರಿಂದ ರಾಗಿ ಮನೆ ಸೇರುತ್ತದೆಯೋ, ಇಲ್ಲವೋ ಎನ್ನುವ ಆತಂಕ ಕಾಡುತ್ತಿದೆ.
ಮಲ್ಲೇಶ್, ರಾಗಿ ಬೆಳೆಗಾರ, ನಂದಿಹಳ್ಳಿ.
ಇನ್ನೂ ಮೂರ್ನಾಲ್ಕು ದಿನ ಮಳೆ ಮುಂದುವರಿದರೆ ರಾಗಿ ಬೆಳೆ ರೈತರ ಕೈ ತಪ್ಪಲಿದೆ. ರಾಗಿ ತೆನೆ ಇರಲಿ, ಹುಲ್ಲು ಸಹ ದೊರೆಯದಾಗಲಿದೆ ಎಂದ ಆತಂಕ ರಾಗಿ ಬೆಳೆಗಾರರದಾಗಿದೆ. ಅಲ್ಲದೆ ಮಳೆ ಬೀಳುತ್ತಿರುವುದರಿಂದ ಹತ್ತದಿನೈದು ದಿನಗಳ ಕಾಲ ಕೆಲಸವಿಲ್ಲವೆಂದು ತಮಿಳುನಾಡಿನಿಂದ ಬಂದಿದ್ದ ಕಟಾವು ಯಂತ್ರಗಳು ಅರ್ಧಕ್ಕರ್ಧ ಹಿಂದಿರುಗಿವೆ. ಹಾಗಾಗಿ ಮಳೆನಿಂತು ಬಿಸಿಲು ಬಂದ ನಂತರವಾದರೂ ಕೊಯ್ಲು ಮಾಡುವ ಆಸೆ ಇಟ್ಟುಕೊಂದಿದ್ದ ರೈತರಿಗೆ ಕೂಲಿಕಾರ್ಮಿಕರ ಸಮಸ್ಯೆ ಎದುರಾಗುತ್ತದೆ. ಒಟ್ಟಾರೆ ಚಂಡಮಾರುತ ತಾಲೂಕಿನ ರಾಗಿ ಬೆಳೆಗಾರ ಕಣ್ಣಲ್ಲಿ ನೀರು ಬರಿಸುತ್ತಿದೆ.
ರಾಗಿ ಬೆಳೆ ಕಟಾವಿಗೆ ಬಂದ ಸಮಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಜಿಟಿಜಿಟಿ ಮಳೆ ರಾಗಿ ಕಾಳುಗಳಲ್ಲಿ ತೇವಾಂಶ ಸಂಗ್ರಹಕ್ಕೆ ಕಾರಣವಾಗುತ್ತಿದೆ. ಗಾಳಿ ಮತ್ತು ಮಳೆಯಿಂದಾಗಿ ಸಾಕಷ್ಟು ರಾಗಿ ಹೊಲಗಳಲ್ಲಿರುವ ಪೈರು ನೆಲಕ್ಕೆ ಬಾಗಿ ಸಮತಟ್ಟಾಗಿದೆ. ಇಂಥ ಸ್ಥಿತಿಯಲ್ಲಿ ರಾಗಿ ಪೈರಿನಲ್ಲಿರುವ ತೆನೆಗಳನ್ನು ಬಿಡಿಬಿಡಿಯಾಗಿ ರೈತರು ಕಟಾವು ಮಾಡಿ ಸಂಗ್ರಹಣೆ ಮಾಡಿಕೊಳ್ಳಬೇಕಾದ ಅನಿವರ‍್ಯತೆ ಎದುರಾಗಿದೆ. ರಾಗಿ ತೆನೆ ನೆಲಕ್ಕೆ ಬಾಗಿರುವುದರಿಂದ ಅದರ ಮೇಲೆ ಸುರಿಯುವ ಮಳೆಯ ನೀರು ಭೂಮಿಗೆ ತಾಗಿಕೊಂಡಿರುವ ತೆನೆಗಳಲ್ಲಿ ಹಾಗೇ ಉಳಿಯಲಿದ್ದು, ದಿನದಿಂದ ದಿನಕ್ಕೆ ತೇವಾಂಶ ಹೆಚ್ಚಳವಾಗಿ ಬಿದ್ದ ಸ್ಥಳದಲ್ಲಿಯೇ ತೆನೆಗಳಲ್ಲಿ ಮೊಳಕೆ ಬರಲು ಶುರುವಾಗಿದೆ. ಇದು ರೈತರ ಪಾಲಿಗೆ ಕೈಗೆ ಬಂದಿದ್ದು ಬಾಯಿಗೆ ಬರದಂತಾಗಿದೆ.
ರಾಗಿ ತೆನೆ ಒಣಗಿ ಬೆಳೆ ಕಟಾವಿಗೆ ಬಂದಿರುವ ಸಮಯದಲ್ಲಿ 4 ದಿನಗಳಿಂದ ಮೋಡಕವಿದ ವಾತಾವರಣವಿದೆ. ಸೂರ್ಯನ ಬೆಳಕು ಬೆಳೆಗೆ ಬಿದ್ದಿಲ್ಲ. ತುಂತುರು ಮಳೆ ಬೀಳುತ್ತಿರುವುದರಿಂದ ಬೆಳೆ ಕಟಾವು ಮಾಡಲು ತೊಂದರೆಯಾಗುತ್ತಿದೆ. ಇದರಿಂದಾಗಿ ಹುಲ್ಲು ಹಾಗೂ ರಾಗಿ ಕಪ್ಪಾಗುವ, ತೆನೆ ನೆಲಕ್ಕೆ ಉದುರುವ ಆತಂಕ ಎದುರಾಗಿದೆ.
-ನಾಗರಾಜು, ರಾಗಿ ಬೆಳೆಗಾರ, ಕೆ.ಸಿ.ಪಾಳ್ಯ