ಪಾವಗಡ: ವಕೀಲರಿಗೆ ರಕ್ಷಣೆ ನೀಡುವ ಸಲುವಾಗಿ , ವಕೀಲರ ಸಂರಕ್ಷಣಾ ಕಾಯ್ದೆಯನ್ನು ಜಾರಿ ಮಾಡಬೇಕೆಂದು ಆಗ್ರಹಿಸಿ ತಾಲ್ಲೂಕು ವಕೀಲರ ಸಂಘದ ನೇತೃತ್ವದಲ್ಲಿ ವಕೀಲರು ಪಟ್ಟಣದಲ್ಲಿ ಶುಕ್ರವಾರ ಬೈಕ್ ನಡೆಸಿ ಪ್ರತಿಭಟನೆ ನಡೆಸಿದರು.
ವಕೀಲರ ಸಂಘದ ಅಧ್ಯಕ್ಷ ಆಂಜನೇಯುಲು ಮಾತನಾಡಿ, ಸರ್ಕಾರ ಭರವಸೆ ನೀಡಿದ ಪ್ರಕಾರ ಬೆಳಗಾವಿ ಅಧಿವೇಶನದಲ್ಲಿ ವಕೀಲರ ಸಂರಕ್ಷಣಾ ಕಾಯ್ದೆಯನ್ನು ಮಂಡಿಸಿ, ಅದನ್ನು ಜಾರಿಮಾಡಬೇಕು. ಅದಕ್ಕೆ ಎಲ್ಲ ಶಾಸಕರು, ಸಚಿವರು ಪಕ್ಷಭೇದ ಮರೆತು ಬೆಂಬಲಿಸಬೇಕು ಎಂದು ಆಗ್ರಹಿಸಿದರು.
ಒಂದು ವೇಳೆ ಸರ್ಕಾರ ಮತ್ತು ಶಾಸಕರು ನಿರ್ಲಕ್ಷಿಸಿದರೆ ವಕೀಲರ ಸಂರಕ್ಷಣೆಗಾಗಿ ಭವಿಷ್ಯದಲ್ಲಿ ಉಗ್ರ ಹೋರಾಟ ಮಾಡಲಾಗುವುದು. ಹೀಗಾಗಿ ವಕೀಲರ ಮನವಿಯನ್ನು ಸರ್ಕಾರ ಪುರಸ್ಕರಿಸಬೇಕು ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ವಕೀಲರ ಸಂಘದ ಖಜಾಂಚಿ ಎ.ಎಸ್ ರಘುನಂದನ್ ಮಾತನಾಡಿ, ಶೀಘ್ರವೇ ವಕೀಲರ ಕಾಯ್ದೆ ಜಾರಿಮಾಡವ ಅಗತ್ಯ ಇದೆ. ಕಾರಣ ಸರ್ಕಾರ ಈ ಬಗ್ಗೆ ವಿಶೇಷ ಕಾಳಜಿ ವಹಿಸ ಬೇಕು ಎಂದರು.
ಕಾರ್ಯದರ್ಶಿ ರಾಮಾಂಜಿ ಮಾತನಾಡಿ, ವಕೀಲರು ನೆಮ್ಮದಿಯಿಂದ ಬದುಕಲು ಬೊಮ್ಮಾಯಿ ಸರ್ಕಾರ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಮಾಡಬೇಕು ಎಂದು ಒತ್ತಾಯಿಸಿದರು.
ವಕೀಲೆ ಆಯಿಷಾ ಭಾನು ಮಾತನಾಡಿ, ವಕೀಲರು ಭಯದಿಂದ ಬದುಕುವ ವಾತಾವರಣ ಇದ್ದು, ಅದರಿಂದ ಹೊರ ಬರಬೇಕಾದರೆ ವಕೀಲರ ಹಿತಕಾಪಡಲು ಕಾನೂನು ಅಗತ್ಯ ಎಂದರು.
ವಕೀಲರಾದ ವೆಂಕಟಸ್ವಾಮಿ, ನಾಗೇಶ್, ಶಿವಕುಮಾರ್, ರಮೇಶ್, ಪಿ.ಆರ್.ಮಂಜುನಾಥ್, ತಿರುಮಲೇಶ್, ರವೀಂದ್ರ, ಮಲ್ಲಿಕಾರ್ಜುನ್, ಚಂದ್ರು, ಕೃಷ್ಣಾನಾಯ್ಕ, ಶೇಷಾನಂದನ್, ನರಸಿಂಹಮೂರ್ತಿ, ಹನುಮಂತರಾಯಪ್ಪ, ಗೌಸಿಯಾ ಭಾನು, ಅಕ್ಕಲಪ್ಪ, ಚನ್ನಕೃಷ್ಣಾರೆಡ್ಡಿ, ಅಂಬರೀಶ್, ನಾಗರಾಜು ಉಪಸ್ಥಿತರಿದ್ದರು.