ತುಮಕೂರು- ನಗರದ ಮಹಾನಗರ ಪಾಲಿಕೆ ವ್ಯಾಪ್ತಿಯ ಕುಣಿಗಲ್ ರಸ್ತೆಯಲ್ಲಿರುವ ರೈಲ್ವೆ ಅಂಡರ್ ಪಾಸ್ ದುರಸ್ಥಿ ಕಾಮಗಾರಿಗೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಚಾಲನೆ ನೀಡಿದರು.
ಅಂಡರ್‌ಪಾಸ್‌ನಲ್ಲಿ ಕಿತ್ತು ಹೋಗಿದ್ದ ಕಬ್ಬಿಣದ ಸರಳುಗಳು, ಚರಂಡಿಯನ್ನು ವೀಕ್ಷಿಸಿ, ದುರಸ್ಥಿ ಕಾಮಗಾರಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಈ ಅಂಡರ್‌ಪಾಸ್ ಸುಮಾರು ವರ್ಷಗಳಿಂದ ತೊಂದರೆಗೆ ಒಳಗಾಗಿ ವಾಹನ ಸವಾರರು ಸುಗಮವಾಗಿ ಸಂಚರಿಸಲು ಸಾಧ್ಯವಾಗದೆ ಪರದಾಡುವಂತಾಗುತ್ತಿತ್ತು. ಅದರಲ್ಲೂ ಮಳೆ ಬಂದಾಗಲಂತೂ ತುಂಬಾ ತೊಂದರೆ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಅಂಡರ್‌ಪಾಸ್ ರಸ್ತೆ, ಚರಂಡಿ ವ್ಯವಸ್ಥೆ, ಫುಟ್‌ಪಾತ್ ಹಾಗೂ ರೈಲಿಂಗ್ಸ್ ನವೀಕರಣ ಕಾಮಗಾರಿಯನ್ನು ಕೈಗೊಳ್ಳಲಾಗಿದೆ ಎಂದರು.
ಈ ಅಂಡರ್ ಪಾಸ್ ಕಾಮಗಾರಿಯನ್ನು ಒಂದು ತಿಂಗಳಲ್ಲಿ ಗುಣಮಟ್ಟದಿಂದ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಈ ಅಂಡರ್‌ಪಾಸ್‌ನಲ್ಲಿ ಗ್ರಾಂಟಿಂಗ್ಸ್ ಅಳವಡಿಸುವುದು, ರಸ್ತೆ ದುರಸ್ಥಿ, ತಡೆಗೋಡೆ ದುರಸ್ಥಿ, ಚರಂಡಿ ದುರಸ್ಥಿ ಕಾಮಗಾರಿ, ಆರ್‌ಸಿಸಿ ರೈಲಿಂಗ್ಸ್ ಅಳವಡಿಕೆ ಸೇರಿದಂತೆ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ದುರಸ್ಥಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
ಈ ಅಂಡರ್ ಪಾಸ್ ಕಾಮಗಾರಿಯಿಂದಾಗಿ ಒಂದು ತಿಂಗಳ ಕಾಲ ಭಾನುವಾರ ಬೆಳಿಗ್ಗೆಯಿಂದ ಈ ಅಂಡರ್‌ಪಾಸ್ ಬಂದ್ ಮಾಡಲಾಗುತ್ತಿದೆ. ಕುಣಿಗಲ್ ಕಡೆಗೆ ಹೋಗುವ ಮತ್ತು ಕುಣಿಗಲ್ ಕಡೆಯಿಂದ ತುಮಕೂರು ನಗರಕ್ಕೆ ಬರುವ ವಾಹನಗಳ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ ಎಂದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಸೂಚಿಸಿರುವ ಮಾರ್ಗಗಳ ಮೂಲಕ ನಗರಕ್ಕೆ ಬಸ್‌ಗಳು ಸೇರಿದಂತೆ ಇತರೆ ವಾಹನ ಸವಾರರು ಪ್ರವೇಶಿಸಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಓ ಜಿ. ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜ, ಉಪ ಆಯುಕ್ತರಾದ ಸಂದೀಪ್ ಕೆ.ಎಸ್., ಎಇಇ ಸುಧೀಂದ್ರ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.