ತುಮಕೂರು: ತಾಲ್ಲೂಕು ಜೆಡಿಎಸ್ ಅಧ್ಯಕ್ಷ, ಮಾಜಿ ಜಿ.ಪಂ.ಸದಸ್ಯ ರಾಮಚಂದ್ರಪ್ಪ ಮತ್ತೆ ಬಿಜೆಪಿ ಕಡೆ ಮುಖ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಶೀಘ್ರ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಜೆಡಿಎಸ್ ಕಾರ್ಯಕರ್ತರ ನಡುವೆ ಗುಸು ಗುಸು ಚರ್ಚೆ ಶುರುವಾಗಿದೆ.
ಮೊದಲಿನಿಂದಲೂ ಬಿಜೆಪಿ ಮಾಜಿ ಶಾಸಕ ಬಿ.ಸುರೇಶ್ ಗೌಡ ಅವರೊಂದಿಗೆ ನಿಷ್ಠರಾಗಿದ್ದ ರಾಮಚಂದ್ರಪ್ಪ ಅವರು ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜೆಡಿಎಸ್ ಸೇರ್ಪಡೆಯಾಗಿ, ತಾಲ್ಲೂಕು ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡಿದ್ದರು.
ಅಧಿಕಾರ ವಹಿಸಿಕೊಂಡು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ರಾಮಚಂದ್ರಪ್ಪ ಅವರು ಇತ್ತಿಚೆಗೆ ಶಾಸಕ ಗೌರಿಶಂಕರ್ ಅವರೊಂದಿಗೆ ಅಂತರ ಕಾಪಾಡಿಕೊಂಡಿದ್ದು, ಪಂಚರತ್ನ ಯಾತ್ರೆ ವೇಳೆಯಲ್ಲಿಯೂ ಅಂತರ ಕಾಪಾಡಿಕೊಂಡಿದ್ದು, ಹೊನ್ನುಡಿಕೆಯಲ್ಲಿಯೇ ಇದ್ದರು ಸಹ ಕಾರ್ಯಕ್ರಮದಿಂದ ದೂರ ಉಳಿದಿದ್ದು, ಶಾಸಕರ ವರ್ತನೆಯಿಂದ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ಕಳೆದ ಎರಡು ತಿಂಗಳಿಂದಲೂ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳದೇ ಇದ್ದಾಗಲೂ ಶಾಸಕ ಗೌರಿಶಂಕರ್ ಅವರು ತಾಲ್ಲೂಕು ಅಧ್ಯಕ್ಷರನ್ನು ಮಾತನಾಡಿಸದೇ, ನಿರ್ಲಕ್ಷ್ಯ ಮಾಡಿರುವುದರಿಂದ ಬೇಸರಗೊಂಡಿರುವ ರಾಮಚಂದ್ರಪ್ಪ ಪಕ್ಷ ತೊರೆಯಲು ಮುಂದಾಗಿದ್ದು, ಇದೇ ತಿಂಗಳಲ್ಲಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನುವ ಮಾತುಗಳು ಜೆಡಿಎಸ್ ವಲಯದಲ್ಲಿ ಕೇಳಿಬಂದಿದೆ.