ತುಮಕೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹುಟ್ಟುಹಬ್ಬದ ಕಾರ್ಯಕ್ರಮದ ನಂತರ ಜೆಡಿಎಸ್ ಮುಖಂಡರು ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗೋವಿಂದರಾಜು ಅವರು ಪುಲ್ ಕ್ಲಾಸ್ ತೆಗೆದುಕೊಂಡ ನಂತರವೂ ಅವರಲ್ಲಿ ಗೋವಿಂದರಾಜು ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ವಿಫಲವಾಗಿದ್ದು, ಹೆಚ್ಡಿಕೆ ಹುಟ್ಟುಹಬ್ಬ ಆಚರಣೆಗೆ ಮೀನಾಮೇಷ ಎಣಿಸಿದ್ದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಜೆಡಿಎಸ್ ಹಿರಿಯ ಮುಖಂಡ ನರಸೇಗೌಡ ಮನೆಗೆ ಭೇಟಿ ನೀಡಿದ್ದಾಗಲೇ ಕುಮಾರಸ್ವಾಮಿ ಅವರು ಸ್ಥಳೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ತಾಕೀತು ಮಾಡಿದ್ದರು ಸಹ ಗೋವಿಂದರಾಜು ಅವರು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಕಡೆಗಣಿಸಿ, ಅನ್ಯ ಪಕ್ಷದ ಮುಖಂಡರು ಕಾರ್ಯಕರ್ತರ ಮಾತಿಗೆ ಮಣೆ ಹಾಕುತ್ತಿರುವುದು ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.
ಜೆಡಿಎಸ್ ಕಚೇರಿಯಲ್ಲಿ ರಣಾಂಗಣ
ನಿನ್ನೆ ಪಕ್ಷದ ಕಚೇರಿಯಲ್ಲಿ ಹೆಚ್ಡಿಕೆ ಹುಟ್ಟುಹಬ್ಬ ಆಚರಣೆ ನಂತರ ದಾನಪ್ಯಾಲೇಸ್ ಬಳಿ ಗೋವಿಂದರಾಜು ಅವರು ಪ್ರತ್ಯೇಕವಾಗಿ ಅಲ್ಪಸಂಖ್ಯಾತ ಮುಖಂಡರೊಂದಿಗೆ ಹುಟ್ಟುಹಬ್ಬ ಆಚರಣೆ ಆಯೋಜಿಸಿದ್ದು, ಪಕ್ಷದ ಅಧ್ಯಕ್ಷ ಆರ್.ಸಿ.ಆಂಜಿನಪ್ಪ, ಸೋಲಾರ್ ಕೃಷ್ಣಮೂರ್ತಿ ಸೇರಿದಂತೆ ಕೆಲವರನ್ನು ಮಾತ್ರ ಪಕ್ಷದ ಕಚೇರಿಯಿಂದ ದಾನಪ್ಯಾಲೇಸ್ ಗೆ ಕರೆದುಕೊಂಡು ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಪಕ್ಷದ ಕಚೇರಿಯಲ್ಲಿ ಇದ್ದ ಹಿರಿಯ ಮುಖಂಡ ನರಸೇಗೌಡ ಅವರನ್ನು ಕರೆಯದೇ, ಉಳಿದ ಕಾರ್ಯಕರ್ತರು, ಮುಖಂಡರಿಗೆ ಮಾಹಿತಿ ನೀಡದೇ ತರಾತುರಿಯಲ್ಲಿ ಅಲ್ಲಿಂದ ಕಾಲ್ಕಿತ್ತಿದ್ದರಿಂದ ಅಸಮಾಧಾನಗೊಂಡ ಕಾರ್ಯಕರ್ತರು ಮುಖಂಡರು, ದಾನಪ್ಯಾಲೇಸ್ ಬಳಿ ಕಾರ್ಯಕ್ರಮ ಮುಗಿಸಿಕೊಂಡು ಪಕ್ಷದ ಕಚೇರಿ ವಾಪಾಸ್ ಬರುತ್ತಿದ್ದಂತೆಯೇ ಗೋವಿಂದರಾಜು ಮೇಲೆ ಮುಗಿಬಿದ್ದಿದ್ದಾರೆ.
ಪಕ್ಷದ ಮುಖಂಡರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗದಿದ್ದರೆ ಈ ಬಾರಿಯೂ ಸೋಲುತ್ತೀಯಾ, ಪಕ್ಷವನ್ನು ಹಾಳು ಮಾಡಲು ಚುನಾವಣೆ ಸಮಯಕ್ಕೆ ಬರ್ತೀಯಾ, ಹೀಗೆ ಮುಂದುವರೆದರೆ ಸರಿ ಇರೋದಿಲ್ಲ, ಕುಮಾರಣ್ಣನ ಮಾತಿಗೆ ಬೆಲೆ ಕೊಡುವುದಿಲ್ಲ ಎಂದ ಮೇಲೆ ನಿನ್ನನ್ನು ಏಕೆ ಬೆಂಬಲಿಸಬೇಕು ಎಂದು ಏರಿದ ಧ್ವನಿಯಲ್ಲಿಯೇ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.