ಗುಬ್ಬಿ: ಮುಂದಿನ ಚುನಾವಣೆಯಲ್ಲಿ ಗೆದ್ದರೆ ಸಚಿವನಾಗುವುದು ಖಚಿತ, ನಾನು ಸಚಿವನಾದರೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಹೆಚ್ಚಲಿವೆ ಎಂದು ಶಾಸಕ ಮಸಾಲೆ ಜಯರಾಂ ತಿಳಿಸಿದರು.
ತಾಲೂಕಿನ ಸಿ ಎಸ್ ಪುರ ಹೋಬಳಿಯ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಸಿ ಎನ್ ಪಾಳ್ಯದಲ್ಲಿ ಗಂಗಾಪೂಜೆ ನಡೆಸಿ ಮಾತನಾಡಿದ ಅವರು ಮುಂದಿನ ಚುನಾವಣೆಯಲ್ಲಿ ಮತದಾರರು ಆರ್ಶೀವಾದ ಮಾಡಿ, ಗೆಲುವಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಕೊಬ್ಬರಿ ಧಾರಣೆ ಕುಸಿದಿರುವುದರಿಂದ ಬೆಳಗಾವಿ ಅಧಿವೇಶನದಲ್ಲಿ ಕೊಬ್ಬರಿ ಖರೀದಿ ಕೇಂದ್ರವನ್ನು ತೆರೆಯುವಂತೆ ಸರ್ಕಾರವನ್ನು ಅಗ್ರಹಿಸುತ್ತೇನೆ .ಜೊತೆಗೆ ಅಡಿಕೆ ಬೆಲೆ ಕುಸಿಯುತ್ತಿರುವ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದರು.
ತಾಲ್ಲೂಕಿನಲ್ಲಿ ಬಿಜೆಪಿಯ ಎಲ್ಲಾ ಕಾರ್ಯಕರ್ತರನ್ನು ಸಮಾನ ದೃಷ್ಟಿಯಿಂದ ಕಾಣುತ್ತಿದ್ದು ಎಲ್ಲರ ಸಹಕಾರದಿಂದ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತಿದೆ.ಹೇಮಾವತಿ ನೀರು ಹರಿಯದಿರುವ ಕೆರೆಗಳಿಗೆ ಪಂಪಿನ ಮೂಲಕ ನೀರನ್ನು ಹರಿಸಿ ತುಂಬಿಸಲಾಗಿದೆ. ಹಾಗಾಗಿ ಈ ಭಾಗಗಳಲ್ಲಿ ಅಂತರ್ಜಲ ಮಟ್ಟ ಉತ್ತಮವಾಗಿದ್ದು,ರೈತರು ಸುಭಿಕ್ಷವಾಗಿದ್ದಾರೆ. ನಮ್ಮ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತರ ಆತ್ಮಹತ್ಯೆಗಳು ಕಡಿಮೆ ಆಗಿವೆ ಎಂದರು.
ನಮ್ಮ ಸರ್ಕಾರವು ರೈತ ಪರವಾಗಿದ್ದುಕೊಂಡು ಆಡಳಿತ ನಡೆಸುತ್ತಿದೆ. ಸರ್ಕಾರದಿಂದ ಹೆಚ್ಚು ಅನುದಾನವನ್ನು ತಂದು ಕ್ಷೇತ್ರದ ಅಭಿವೃದ್ಧಿ ಮಾಡಿ ಮತದಾರರ ಋಣ ತೀರಿಸಲು ಬದ್ಧವಾಗಿರುತ್ತೇನೆ .
ಯಾವುದೇ ತಾರತಮ್ಯ ಮಾಡದೆ ತುರುವೇಕೆರೆ ಕ್ಷೇತ್ರದ ಎಲ್ಲಾ ಹೋಬಳಿಗಳಿಗೂ ಸಮಾನವಾಗಿ ಅನುದಾನವನ್ನು ಹಂಚಿ ಅಭಿವೃದ್ಧಿ ಮಾಡಲಾಗಿದೆ ಎಂದು ತಿಳಿದರು.
ಮುಖಂಡ ಕುಮಾರ್ ಮಾತನಾಡಿ ರೈತರಿಗೆ ತುಂಬಾ ಅಗತ್ಯವಾಗಿರುವ ನೀರಾವರಿ ಯೋಜನೆಗಳನ್ನು ಶಾಸಕರು ಶಕ್ತಿ ಮೀರಿ ಮಾಡುವ ಮೂಲಕ ಮತದಾರರ ಋಣವನ್ನು ತೀರಿಸಲು ಪ್ರಯತ್ನಿಸಿದ್ದಾರೆ. ಇನ್ನು ಹೆಚ್ಚಿನ ಶಕ್ತಿಯನ್ನು ಅವರಿಗೆ ತುಂಬಬೇಕಾಗಿರುವುದರಿಂದ ಉಎಲ್ಲರೂ ಅವರ ಬೆಂಬಲಕ್ಕೆ ನಿಲ್ಲಬೇಕಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಂಡುರಂಗಯ್ಯ,ಉಪಾಧ್ಯಕ್ಷೆ ನವ್ಯ ,ಸದಸ್ಯರಾದ ಕೆಂಪರಾಜು, ರಘು, ಮುಖಂಡರಾದ ಪ್ರಕಾಶ್, ಚೆನ್ನಿಗಪ್ಪ ,ಶ್ರೀಧರ್, ಪುಟ್ಟಸ್ವಾಮಿಗೌಡ, ಅನುಸೂಯಮ್ಮ, ವಸಂತ್ ಕುಮಾರ್ ರಾಜೇನ ಹಳ್ಳಿ, ರವೀಂದ್ರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.