ಗ್ರಾಮಾಂತರದಲ್ಲಿ ವಾರ್ ಒನ್ ಸೈಡ್
ತುಮಕೂರು: ಗ್ರಾಮಾಂತರದಲ್ಲಿ ಚುನಾವಣೆ ಏಕಪಕ್ಷೀಯವಾಗಿ ನಡೆಯಲಿದ್ದು, ಜನರು ಜೆಡಿಎಸ್ ಆಯ್ಕೆ ಮಾಡಲಿದ್ದಾರೆ ಎಂದು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ತಿಳಿಸಿದರು.
ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಜನರ ಬಳಿಗೆ ಮತ ಭಿಕ್ಷೆಗಾಗಿ ಹೋಗುತ್ತೇನೆ, ಜನರ ಸೇವೆ ಮಾಡಿರುವುದಕ್ಕೆ ಮತ ನೀಡುತ್ತಾರೆ, ಸೇವೆ ಮಾಡದೇ ಇರುವವರಿಗೆ ಮತ ನೀಡುತ್ತಾರೆಯೇ ಎಂದು ಪ್ರಶ್ನಿಸಿದರು.
ಐದು ವರ್ಷವಾಗಿ ಪ್ರಾಮಾಣಿಕವಾಗಿ ಜನರು ನೀಡಿದ್ದ ಕೂಲಿ ಕೆಲಸವನ್ನು ಮಾಡಿದ್ದೇನೆ, ಜನ ಮತ ಭಿಕ್ಷೆ ಹಾಕುತ್ತಾರೆ ಎಂಬ ವಿಶ್ವಾಸವಿದೆ , ಚುನಾವಣೆಯಲ್ಲಿ ಯಾರು ಜನ ಇದ್ದಾರೆ ಎನ್ನುವುದು ಗೊತ್ತಾಗಲಿದೆ ಎಂದರು.
ಹೈಕೋರ್ಟ್ ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ, ಈ ವಿಚಾರದಲ್ಲಿ ನ್ಯಾಯಾಲಯದ ಮೇಲೆ ಗೌರವವಿದೆ, ನ್ಯಾಯಾಲಯದಿಂದ ನ್ಯಾಯ ಸಿಗುವ ವಿಶ್ವಾಸ ಇದೆ ಎಂದರು.
ಇಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದು, ನಾಳೆ ಅಪಾರ ಪ್ರಮಾಣದ ಬೆಂಬಲಿಗರೊಂದಿಗೆ ಬಿಜಿಎಸ್ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಕುಟುಂಬಸ್ಥರೊಂದಿಗೆ ನಾಮಪತ್ರ ಸಲ್ಲಿಸಲಾಗುವುದು ಎಂದರು.
ನಾಮಪತ್ರ ಸಲ್ಲಿಕೆಗೆ ಕುಮಾರಣ್ಣ ಆಗಮಿಸುವ ನಿರೀಕ್ಷೆ ಇದ್ದು, ಗ್ರಾಮಾಂತರದಲ್ಲಿ ಜೆಡಿಎಸ್ ಬಲ ಪ್ರದರ್ಶನ ಕಾಣಲಿದೆ, ನನ್ನ ಮೇಲಿನ ಪ್ರೀತಿಯಿಂದಲೇ ಸಾವಿರಾರು ಜನರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಹಾಲನೂರು ಅನಂತ್, ಪಾಲಿಕೆ ಸದಸ್ಯ ಹೆಚ್.ಡಿ.ಕೆ.ಮಂಜುನಾಥ್, ಹಾಲನೂರು ಲೇಪಾಕ್ಷಿ, ಹಿರೇಹಳ್ಳಿ ಮಹೇಶ್, ಬೆಳಗುಂಬ ವೆಂಕಟೇಶ್, ನರುಗನಹಳ್ಳಿ ವಿಜಯಕುಮಾರ್, ತನ್ವೀರ್, ಬೆಳಗುಂಬ ಉಸ್ತುವಾರಿ ಹರೀಶ್ ಸೇರಿದಂತೆ ಇತರರಿದ್ದರು.