ತುಮಕೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೈಸೂರು, ಚಾಮರಾಜನಗರದಲ್ಲಿ ಸ್ಪರ್ಧಿಸಿ ತಲಾ ಐವತ್ತು ಕೋಟಿ ಖರ್ಚು ಮಾಡಿದ ಸೋಮಣ್ಣ ಈಗ ಮತ್ತೆ ಚುನಾವಣೆಗೆ ನಿಂತಿದ್ದಾರೆ ಎಂದರೆ ಎಷ್ಟು ಲೂಟಿ ಮಾಡಿರಬೇಕು ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.
ತಿಪಟೂರಿನ ಕೆ.ಬಿ.ಕ್ರಾಸ್ ನಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ದುಡ್ಡಿದೆ ಎನ್ನುವ ಕಾರಣಕ್ಕೆ ಬೆಂಗಳೂರಿನಿಂದ ತುಮಕೂರಿಗೆ ಕರ್ಕೊಂಡು ಬಂದು ಚುನಾವಣೆಗೆ ನಿಲ್ಲಿಸಿದ್ದಾರೆ, ಚಾಮರಾಜನಗರ, ವರುಣಾದಲ್ಲಿ ಸೋಲಿಸಿ ಓಡಿಸಿದಂತೆ, ತುಮಕೂರಿನಲ್ಲಿಯೂ ಸೋಮಣ್ಣರನ್ನು ಸೋಲಿಸಿ ಓಡಿಸಬೇಕು ಎಂದು ಕರೆ ನೀಡಿದರು.
ಕೆಲಸಗಾರ ಸೋಮಣ್ಣ ವಸತಿ ಸಚಿವರಾಗಿ ಬಡವರಿಗೆ ಒಂದು ಮನೆ ಕೊಡಲಿಲ್ಲ, ಸೋಮಣ್ಣ ಅಧಿಕಾರದಲ್ಲಿ ಒಂದು ಮನೆ ಕಟ್ಟಿಸಿದ ದಾಖಲೆ ಇದ್ದರೆ ತೋರಿಸಲಿ, ಅದನ್ನು ಬಿಟ್ಟು ಕೆಲಸಗಾರ ಕೆಲಸಗಾರ ಎಂದರೆ ಯಾರು ನಂಬುತ್ತಾರೆ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಲೂಟಿ ಹೊಡೆಯುವುದನ್ನು ಬಿಟ್ಟು ಏನು ಮಾಡಲಿಲ್ಲ ಅದರಲ್ಲಿ ಸೋಮಣ್ಣ ಪಾಲುದಾರ, ಬಡವರಿಗೆ ಒಂದು ಮನೆ ಕಟ್ಟಿಕೊಡದ ಸೋಮಣ್ಣ ನೀನು ಪಾರ್ಲಿಮೆಂಟ್ ಗೆ ಹೋಗಿ ಏನ್ ಮಾಡ್ತೀರಾ? ನಿಮಗೆ ಧ್ವನಿ ಇದೆಯೇ ಎಂದು ಪ್ರಶ್ನಿಸಿದರು.
ಕೆಲಸವನ್ನೇ ಮಾಡದ ಸೋಮಣ್ಣರನ್ನು ಲೋಕಸಭೆಗೆ ಕಳುಹಿಸಿದರೆ ಮೋದಿ ಎದುರು ಮಾತನಾಡುವುದಿಲ್ಲ, ರಾಜ್ಯದ ಹಿತವನ್ನು ಕಾಪಾಡುವುದಿಲ್ಲ ಸೋಮಣ್ಣನಿಗೆ ಏಕೆ ಮತ ನೀಡಬೇಕೆಂದು ಮತದಾರರು ಪ್ರಶ್ನಿಸಬೇಕು, ಯಾವುದೇ ಕಾರಣಕ್ಕೆ ಸೋಮಣ್ಣನಿಗೆ ಮತ ನೀಡದೇ ಸೋಲಿಸಬೇಕೆಂದು ಕರೆ ನೀಡಿದರು.
ಮುದ್ದಹನುಮೇಗೌಡ ಅವರು ಸಂಸತ್ತಿನಲ್ಲಿ ರೈತರ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ ಅದಕ್ಕೆ ದಾಖಲೆ ಇದೆ, ಸಂಸತ್ತಿನಲ್ಲಿ ಮಾತೇ ಆಡದವರನ್ನು ಸಂಸತ್ತಿಗೆ ಕಳುಹಿಸುವುದರಿಂದ ಯಾವುದೇ ಪ್ರಯೋಜನವಿಲ್ಲ, ರಾಜ್ಯಕ್ಕೆ ಅನ್ಯಾಯವಾದರೂ ಮಾತನಾಡದ ಬಿಜೆಪಿ ಸಂಸದರಿಂದ ರಾಜ್ಯದ ಹಿತಾಸಕ್ತಿ ಕಾಪಾಡಲು ಸಾಧ್ಯವಿಲ್ಲ ಎಂದು ಹರಿಹಾಯ್ದರು.