ಹರಕೆಯ ಕುರಿಯಾದರೆ ವಾರ್ಡನ್ ನಿವೇದಿತಾ ?

ಮಧುಗಿರಿ ಹಾಸ್ಟೆಲ್ ವಿದ್ಯಾರ್ಥಿನಿಗೆ ಹೆರಿಗೆಯಾದ ಪ್ರಕರಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಾರ್ಡನ್ ನಿವೇದಿತಾ ಮೇಲಾಧಿಕಾರಿಗಳಿಗೆ ಹರಕೆಯ ಕುರಿಯಾದರೆ ಎಂಬ ಸಂಶಯ ವ್ಯಕ್ತವಾಗಿದೆ.

ಮಧುಗಿರಿಯಲ್ಲಿ ಒಂಭತ್ತನೇ ತರಗತಿ ಓದುತ್ತಿದ್ದ ಹುಡುಗಿಗೆ ಚಿಕ್ಕಬಳ್ಳಾಪುರದಲ್ಲಿ ಹೆರಿಗೆಯಾಗಿದ್ದು, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ, ಕಳೆದ ಜೂನ್ ನಲ್ಲಿ ವಿದ್ಯಾರ್ಥಿನಿ ನಿಲಯಕ್ಕೆ ದಾಖಲಾಗಿದ್ದ ಹುಡುಗಿ ನಾಲ್ಕೈದು ಬಾರಿ ಬಾಗೇಪಲ್ಲಿಗೆ ಹೋಗಿ ಬಂದಿದ್ದಾಳೆ.

ಶಾಲೆ ಮತ್ತು ಹಾಸ್ಟೆಲ್ ಚಟುವಟಿಕೆಗಳಲ್ಲಿ ನಾಯಕತ್ವವಹಿಸುತ್ತಿದ್ದ, ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುತ್ತಿದ್ದ ಪ್ರತಿಭಾನ್ವಿತ ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದು, ಚಿಕ್ಕವಯಸ್ಸಿನಲ್ಲಿಯೇ ತಾಯಿ ಆಗಿರುವುದು ನಾಗರೀಕ ಸಮಾಜ ತಲೆ ತಗ್ಗಿಸುವ ವಿಚಾರ.

ಪ್ರಕರಣದಲ್ಲಿ ವಾರ್ಡನ್ ಒಬ್ಬರನ್ನೇ ಅಮಾನತುಗೊಳಿಸಿರುವುದು ಏಕೆ? ಹಾಸ್ಟೆಲ್ ವಿದ್ಯಾರ್ಥಿನಿಯಾದ ತಕ್ಷಣಕ್ಕೆ ಸಮಾಜ ಕಲ್ಯಾಣ ಇಲಾಖೆ, ವಾರ್ಡನ್ ಅನ್ನು ಹೊಣೆಗಾರಿಕೆ ಮಾಡುವುದು ಸರಿಯೇ? ಹಾಸ್ಟೆಲ್ ಗಿಂತ ಹೆಚ್ಚಿನ ಸಮಯ ಶಾಲೆಯಲ್ಲಿಯೇ ಇರುವ ವಿದ್ಯಾರ್ಥಿನಿಯನ್ನು ಗಮನಿಸುವ ಜವಾಬ್ದಾರಿ ಅಲ್ಲಿನ ಕ್ಲಾಸ್ ಟೀಚರ್, ಮುಖ್ಯೋಪಾಧ್ಯಾಯರಿಗೆ ಇಲ್ಲವೇ ಎನ್ನುವ ಪ್ರಶ್ನೆ ಎದ್ದಿದೆ.

ಹಾಸ್ಟೆಲ್, ಶಾಲೆಗಳಲ್ಲಿ ನಿಯಮಿತವಾಗಿ ಮಕ್ಕಳ ಆರೋಗ್ಯ ತಪಾಸಣೆ ಮಾಡಬೇಕೆಂಬ ನಿಯಮವಿದೆ, ಹಾಸ್ಟೆಲ್ ನಲ್ಲಿ ಆದ ಆರೋಗ್ಯ ತಪಾಸಣೆಯಿಂದ ವಿದ್ಯಾರ್ಥಿನಿ ತಪ್ಪಿಸಿಕೊಂಡಳು ಎಂದು  ಸಹಪಾಠಿಗಳೇ ಹೇಳುತ್ತಾರೆ, ನಿಯಮಿತವಾಗಿ ಹಾಸ್ಟೆಲ್ ಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆ ನಡೆಯುತ್ತಿದೆಯೋ ಇಲ್ಲವೋ ಎನ್ನುವುದನ್ನು ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆಯೇ? ಎನ್ನುವ ಪ್ರಶ್ನೆಯೂ ಉದ್ಭವವಾಗಿದೆ.

ಹಾಸ್ಟೆಲ್ ಗಳಿಗೆ ಅನಿರೀಕ್ಷಿತ ಭೇಟಿ, ಪರಿಶೀಲನೆ, ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆಯನ್ನು ನಡೆಸಿದ್ದರೆ ಆರೋಗ್ಯ ತಪಾಸಣೆ ನಿಯಮಿತವಾಗಿ ನಡೆದಿಲ್ಲ ಎಂಬ ವಿಚಾರವೂ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳ ಗಮನಕ್ಕೆ ಬರುತ್ತಿತ್ತು ಅಲ್ಲವೇ? ಇದ್ಯಾವುದು ಗಮನಕ್ಕೆ ಬಾರದಂತೆ ನಡೆದು ಹೋಗಿದೆ ಎಂದರೆ ಅದು ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಹಾಗೂ ಕರ್ತವ್ಯಲೋಪವಲ್ಲದೇ ಬೇರೆನೂ ಅಲ್ಲ.

ಸಮಾಜ ಕಲ್ಯಾಣ ಇಲಾಖೆಯ ಮೇಲುಸ್ತುವಾರಿ ವಹಿಸಿರುವ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಪಂಚಾಯತ್ ರಾಜ್ ಮತ್ತು ನರೇಗಾ ಬಿಟ್ಟು ಇತರ ಇಲಾಖೆಗಳ ಅದರಲ್ಲಿಯೂ ಕಲ್ಯಾಣ ಇಲಾಖೆಗಳ ಹಾಸ್ಟೆಲ್ ಗಳಿಗೆ ಭೇಟಿ ಅಲ್ಲಿನ ಪರಿಸ್ಥಿತಿ ಅರಿಯುವ ಕೆಲಸಕ್ಕೆ ಮುಂದಾಗಿಲ್ಲ, ಪಂಚಾಯತ್ ರಾಜ್ ಗೆ ಜೋತು ಬಿದ್ದಿರುವ ಜಿ.ಪಂ.ಆಡಳಿತ ತಲೆ ತೊಳೆದುಕೊಳ್ಳಲು ವಾರ್ಡನ್ ನಿವೇದಿತಾ ಅವರನ್ನು ಅಮಾನತು ಮಾಡಿ, ಹರಕೆಯ ಕುರಿಯಾಗಿಸಿದೆ.

ವಿದ್ಯಾರ್ಥಿ ನಿಲಯದ ಹೊರಗೆ ಆಗುವ ಘಟನೆಗಳಿಗೆ ವಾರ್ಡನ್ ಹೊಣೆಗಾರರಾಗಲು ಸಾಧ್ಯವೇ? ಕರ್ತವ್ಯದಲ್ಲಿ ನಿರ್ಲಕ್ಷ್ಯವಾದರೆ ಅದರಲ್ಲಿ ಶಿಕ್ಷಕರು, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳ ಪಾತ್ರವಿಲ್ಲವೇ? ವಾರ್ಡನ್ ಮೇಲೆ ಕ್ರಮ ಕೈಗೊಂಡಿರುವ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಶಿಕ್ಷಕರು, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುತ್ತಾರೆಯೇ?

Verified by MonsterInsights