ತುಮಕೂರು: ಕಿಡ್ನಿ ಕಸಿ ಮಾಡಲು ಸಿದ್ಧಾರ್ಥ ವೈದ್ಯಕೀಯ ಕಾಲೇಜಿಗೆ ಅನುಮತಿ ನೀಡಿದೆ ಎಂದು ಸಾಹೇ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಮಾಜಿ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಡಯಾಲಿಸಿಸ್ ಸೆಂಟರ್ ನಡೆಯುತ್ತಿದ್ದು, ನೂರಾರು ಮಂದಿಗೆ ಸಹಾಯವಾಗಿದ್ದು, ಕಿಡ್ನಿ ಕಸಿಗೆ ಅವಶ್ಯಕವಾಗಿದ್ದ ಅನುಮತಿಯನ್ನು ಸರ್ಕಾರ ನೀಡಿದ್ದು, ಶೀಘ್ರದಲ್ಲಿಯೇ ಕಿಡ್ನಿ ಕಸಿ ಚಿಕಿತ್ಸೆ ಪ್ರಾರಂಭಿಸಲಾಗುವುದು ಎಂದರು.
ಡಾ.ಸಂಜಯ್, ಡಾ.ಶ್ರೀರಾಮ್ ಡಾ.ಪವನ್, ಡಾ.ಪ್ರಭಾಕರ್ ಸೇರಿದಂತೆ ಎಲ್ಲರು ಸೇರಿಕೊಂಡು ಅಂಗಾಂಗ ಚಿಕಿತ್ಸೆ ವೈದ್ಯಕೀಯ ಕಾಲೇಜಿನಲ್ಲಿ ಇಂತಹ ಚಿಕಿತ್ಸೆ ದೊರಕಿರುವುದು ಇದೇ ಮೊದಲು ಎಂದು ಹೇಳಿದರು.
ಉಪ ಕುಲಾಧಿಪತಿ ಡಾ.ಬಾಲಕೃಷ್ಣ ಶೆಟ್ಟಿ ಮಾತನಾಡಿ ಜೀವ ಸಾರ್ಥಕತೆ ತಂಡ ಮೆದುಳು ನಿಷ್ಕ್ರಿಯ ಗೊಂಡ ವ್ಯಕ್ತಿಗಳ ಅಂಗಾಂಗಳನ್ನು ರಕ್ಷಿಸಲು ನೆರವಾಗಿದ್ದು, ಅಂಗಾಂಗ ಕಸಿಯನ್ನು ಯಶಸ್ವಿಯಾಗಿ ಮಾಡುವ ಮೂಲಕ ಅಂಗಾಂಗಗಳನ್ನು ಬಳಕೆ ಮಾಡಿಕೊಳ್ಳಲು ಸಾಧ್ಯವಾಯಿತು ಎಂದರು.
ಡಾ.ಸಂಜಯ್ ಮಾತನಾಡಿ ತುಮಕೂರು ಜಿಲ್ಲೆಯಲ್ಲಿ ಮೊದಲ ಬಾರಿಗೆ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯಿಂದ ಏಳು ಮಂದಿಗೆ ಜೀವ ನೀಡಬಹುದಾಗಿದ್ದು, ಸಿದ್ಧಾರ್ಥದಲ್ಲಿ ಆರಂಭಗೊಂಡಿರುವ ಈ ವಿಭಾಗ, ಕಳೆದ ಮೂರು ವರ್ಷಗಳಲ್ಲಿಯೇ ಅಂಗಾಂಗ ಕಸಿ ಮಾಡಲಾಗಿದೆ ಎಂದರು.
ಅಂಗಾಂಗ ದಾನದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನದಲ್ಲಿದೆ, ಸಾವನ್ನಪ್ಪಿದ ನಂತರ ಅಂಗಾಂಗ ದಾನ ಮಾಡುವ ಮೂಲಕ ನೂರಾರು ಮಂದಿಗೆ ಬದುಕು ಕೊಡಬಹುದಾಗಿದೆ, ಇಂತಹ ಪ್ರಯತ್ನಕ್ಕೆ ಎಲ್ಲರೂ ಕೈ ಜೋಡಿಸಬೇಕು, ಗ್ರಾಮೀಣರಲ್ಲಿ ಅಂಗಾಂಗ ಕಸಿಯ ಬಗ್ಗೆ, ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸಬೇಕೆಂದು ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪ್ರಾಂಶುಪಾಲ ಡಾ.ಪ್ರಭಾಕರ್, ಡಿಎಚ್ಒ ಡಾ.ಮಂಜನಾಥ್ ಸೇರಿದಂತೆ ಇತರರು ಇದ್ದರು.