ತುಮಕೂರು: ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನರಸಿಂಹರಾಜು ಅವರ ಕುಟುಂಬ ಸರ್ಕಾರಿ ಗುಂಡುತೋಪು ಕಬಳಿಸಿರುವ, ಮಾರಾಟ ಮಾಡಿರುವ ಆರೋಪದ ಮೇರೆಗೆ ಕ್ಯಾತ್ಸಂದ್ರ ಠಾಣೆಯಲ್ಲಿ ದೂರು ದಾಖಲಾಗಿದೆ.
ತುಮಕೂರು ತಾಲ್ಲೂಕು ಅನುಪನಹಳ್ಳಿ ಗ್ರಾಮದ ಸರ್ವೇ ನಂ 35ರ ಪಿಯಲ್ಲಿದ್ದ 0.24 ಗುಂಟೆ ಹಾಗೂ ಸರ್ವೇ ನಂಬರ್ 24/ಪಿ9ರಲ್ಲಿದ್ದ 6 ಗುಂಟೆ ಗುಂಡುತೋಪನ್ನು ನರಸಿಂಹರಾಜು ಅವರ ಕುಟುಂಬ ಅಕ್ರಮವಾಗಿ ಕಬಳಿಸಿ ಮಾರಾಟ ಮಾಡಿದ್ದಾರೆ ಎಂದು ದುರ್ಗದಹಳ್ಳಿ ಡಿ.ಪಿ.ತಿಮ್ಮರಾಜು ದೂರು ನೀಡಿದ್ದಾರೆ.
ಘಟನೆಯ ವಿವರ: ಅನುಪನಹಳ್ಳಿ ಗ್ರಾಮ ಲೆಕ್ಕಾಧಿಕಾರಿಯಾಗಿದ್ದ ನರಸಿಂಹಮೂರ್ತಿ( ನರಸಿಂಹರಾಜು ಅವರ ತಂದೆ) ಅವರು ಹೆಂಡತಿ ಪುಟ್ಟತಾಯಮ್ಮ ಅವರ ಹೆಸರಿಗೆ ಎಂ.ಆರ್.ಸಂಖ್ಯೆ:03/90-91, ಎಲ್.ಆರ್.ಡಿ.ಸಿ.ಆರ್ ಸಂಖ್ಯೆ: 275/91-92ರಂತೆ ನಕಲಿ ದಾಖಲೆ ಸೃಷ್ಟಿ ಗುಂಡುತೋಪು ಕಬಳಿಸಿದ್ದಾರೆ.
ನಂತರ 2005ರಲ್ಲಿ ಪುಟ್ಟತಾಯಮ್ಮ, ವಿಜಯ್ ಕುಮಾರ್, ನರಸಿಂಹರಾಜು ಅವರು 48 ಸಾವಿರ ರೂಪಾಯಿಗೆ ಅನುಪನಹಳ್ಳಿ ಯ ನಾರಾಯಣಪ್ಪ ಅವರಿಗೆ ಮಾರಾಟ ಮಾಡಿದ್ದಾರೆ, ಗುಂಡುತೋಪು ಪಕ್ಕದಲ್ಲಿ ಜಮೀನು ಹೊಂದಿರುವ ನಾರಾಯಣಪ್ಪ ಅವರಿಗೆ ಅಕ್ರಮವಾಗಿ ಕಬಳಿಸಿದ್ದ ಗುಂಡುತೋಪನ್ನೆ ಮಾರಾಟ ಮಾಡಿದ್ದಾರೆ.
ಸರ್ಕಾರಿ ಭೂಮಿ ಒತ್ತುವರಿ ಭೂ ಕಂದಾಯ ತಿದ್ದುಪಡಿ ಅಧಿನಿಯಮದಡಿ ಚಸರ್ಕಾರಿ ಆಸ್ತಿ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ತಿಮ್ಮರಾಜು ಅವರು ನಕಲಿ ದಾಖಲೆ ಸೃಷ್ಟಿಸಿ ಗುಂಡುತೋಪನ್ನು ಕಬಳಿಸಿ ಮಾರಾಟ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದೂರು ನೀಡಿದ್ದು, ಕ್ಯಾತ್ಸಂದ್ರ ಠಾಣೆಯಲ್ಲಿ ಎನ್.ಸಿ.ಪ್ರಕರಣ ದಾಖಲಿಸಲಾಗಿದೆ.