ಹುಟ್ಟುಹಬ್ಬದಂದೆ ಪಕ್ಷ ಬಿಡುವ ತೀರ್ಮಾನ ಘೋಷಣೆ..?
ತುಮಕೂರು: ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಪಕ್ಷ ತೊರೆಯಲು ಮುಂದಾಗಿರುವ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ತಮ್ಮ ಹುಟ್ಟುಹಬ್ಬದಂದೇ ತಮ್ಮ ಮುಂದಿನ ನಡೆಯನ್ನು ಅಭಿಮಾನಿಗಳಿಗೆ ತಿಳಿಸಲಿದ್ದಾರೆ ಎನ್ನಲಾಗಿದೆ.
ಸೆ.16ರಂದು ಮಾಜಿ ಶಾಸಕ ಗೌರಿಶಂಕರ್ ಅವರ ಹುಟ್ಟುಹಬ್ಬವಿದ್ದು, ಅಂದೇ ತಮ್ಮ ಮುಂದಿನ ರಾಜಕೀಯ ನಿರ್ಧಾರವನ್ನು ಅಭಿಮಾನಿಗಳಿಗೆ ತಿಳಿಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಜೆಡಿಎಸ್-ಬಿಜೆಪಿ ಮೈತ್ರಿಯಿಂದ ತುಮಕೂರು ಗ್ರಾಮಾಂತರದಲ್ಲಿ ಶಾಸಕ ಬಿ.ಸುರೇಶ್ ಗೌಡ ಅವರೊಂದಿಗೆ ಒಂದಾಗಿ ಚುನಾವಣೆಯನ್ನು ಎದುರಿಸುವುದು ಅಭಾಸವಾಗಲಿದೆ ಎನ್ನಲಾಗುತ್ತಿದೆ.
ಗ್ರಾಮಾಂತರದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾಗಿರುವ ಜೆಡಿಎಸ್ ಮತ್ತು ಬಿಜೆಪಿ ಮುಖಂಡರಷ್ಟೇ ಅಲ್ಲದೇ ಕಾರ್ಯಕರ್ತರಲ್ಲಿಯೂ ಜಿದ್ದಾಜಿದ್ದಿನ ಪೈಪೋಟಿ ಇದೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋಲನ್ನು ಕಂಡಿರುವ ಮಾಜಿ ಶಾಸಕ ಗೌರಿಶಂಕರ್ ಅವರು, ಮತ್ತೆ ಬಿಜೆಪಿಯೊಂದಿಗೆ ಬೆರತು ಚುನಾವಣೆ ಎದುರಿಸುವುದು ಕಷ್ಟ ಎನ್ನುವ ಮಾತುಗಳು ಕಾರ್ಯಕರ್ತರಲ್ಲಿದೆ.
ಇತ್ತಿಚೆಗೆ ಬೆಂಗಳೂರಿನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರು, ಮುಖಂಡರ ಸಭೆಯಲ್ಲಿಯೂ ಜೆಡಿಎಸ್ ವರಿಷ್ಠ ದೇವೇಗೌಡ ಅವರು ಸಹ ಗೌರಿಶಂಕರ್ ಕಾಂಗ್ರೆಸ್ ಸೇರುವ ತೀರ್ಮಾನ ಕೈಗೊಂಡಿದ್ದಾರೆ ಎಂದು ಮಾತನಾಡಿದ್ದು, ಲೋಕಸಭೆ ಚುನಾವಣೆಯಲ್ಲಿ ತುಮಕೂರು ಕ್ಷೇತ್ರವನ್ನು ಜೆಡಿಎಸ್ ಪಡೆದು ಗೌರಿಶಂಕರ್ ಅವರನ್ನು ಕಣಕ್ಕೆ ಇಳಿಸಬೇಕೆಂಬ ಒತ್ತಾಯವನ್ನು ವರಷ್ಠರಲ್ಲಿ ಕಾರ್ಯಕರ್ತರು ಮಾಡುತ್ತಿದ್ದಾರೆ.