ತುಮಕೂರು: ಜಿಲ್ಲಾ ಉಸ್ತುವಾರಿ ಸಚಿವರ ಸ್ವಕ್ಷೇತ್ರದಲ್ಲಿಯೇ ಅಧಿಕಾರಿಗಳು ಶಿಷ್ಟಾಚಾರವನ್ನು ಉಲ್ಲಂಘಿಸಿ ಪಕ್ಷದ ಅಧ್ಯಕ್ಷನಿಂದ ಸರ್ಕಾರಿ ಕಚೇರಿಗೆ ಶಂಕುಸ್ಥಾಪನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಕೊರಟಗೆರೆ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ಅಶ್ವತ್ಥ್ ನಾರಾಯಣ್ ಅವರಿಂದ ಕೊರಟಗೆರೆ ತೋಟಗಾರಿಕೆ ಇಲಾಖೆ ಕಚೇರಿಗೆ ಶಂಕುಸ್ಥಾಪನೆ ಮಾಡಿಸಿರುವುದು ಈಗ ಚರ್ಚೆಗೆ ಕಾರಣವಾಗಿದೆ.
ಜನಪ್ರತಿನಿಧಿಗಳು ಅಥವಾ ಇಲಾಖೆಯ ಉನ್ನತ ಅಧಿಕಾರಿಗಳಿಂದ ನಡೆಸಬೇಕಾದ ಕಾರ್ಯಕ್ರಮವನ್ನು ಪಕ್ಷಕ್ಕೆ ಸೀಮಿತಗೊಳಿಸುವ ಮೂಲಕ ತೋಟಗಾರಿಕೆ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸರ್ಕಾರದ ಶಿಷ್ಟಾಚಾರವನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ ಎನ್ನಲಾಗಿದೆ.
ಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ಅಶ್ವತ್ಥ್ ನಾರಾಯಣ್ ಗೃಹ ಸಚಿವರಿಗೆ ಆತ್ಮೀಯನಾಗಿದ್ದು, ಗೃಹ ಸಚಿವರ ಪ್ರಭಾವ ಬಳಸಿಕೊಂಡು ಕ್ಷೇತ್ರದೆಲ್ಲೆಡೆ ಅಧಿಕಾರಿಗಳ ಮೇಲೆ ಒತ್ತಡ ಹಾಕುವ ಕೆಲಸವನ್ನು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇತ್ತಿಚೆಗೆ ಕಲ್ಕೆರೆ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಕೋಳಿಫಾರಂಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು ಸಹ ಅಶ್ವತ್ಥ್ ನಾರಾಯಣ್ ಅವರು ಕೋಳಿಫಾರಂ ಮಾಲೀಕರ ಪರವಾಗಿ ನಿಂತು ಗ್ರಾಮಸ್ಥರ ಮೇಲೆ ದಬ್ಬಾಳಿಕೆ ನಡೆಸುತ್ತಿಸ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದರು.
ಇಂತಹ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಪ್ರಮುಖವಾಗಿಟ್ಟು ಅಧಿಕಾರಿಗಳು ಸರ್ಕಾರಿ ಕಚೇರಿಗೆ ಶಂಕುಸ್ಥಾಪನೆ ಮಾಡುವ ಉಮೇದು ತೋರಿಸಿ, ಅಂಧ ದರ್ಬಾರ್ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗೃಹ ಸಚಿವರು ಕ್ಷೇತ್ರಕ್ಕೆ ಬಂದಾಗಲೋ ಇಲ್ಲ ಇಲಾಖೆಯ ಉನ್ನತ ಅಧಿಕಾರಿಗಳಿಂದಲೋ ಅಥವಾ ಜನಪ್ರತಿನಿಧಿಗಳಿಂದ ಶಂಕು ಸ್ಥಾಪನೆ ಮಾಡಿಸದೇ ಪಕ್ಷ ಅಧ್ಯಕ್ಷನನ್ನು ಓಲೈಸಲು ಮುಂದಾಗಿರುವ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಪ್ರಜ್ಞಾವಂತರು ಒತ್ತಾಯಿಸಿದ್ದಾರೆ.