ಸೊಗಡು ಶಿವಣ್ಣ ಮನೆಗೆ ಮಾಜಿ ಸಿಎಂ ಹೆಚ್.ಡಿ.ಕೆ.ಭೇಟಿ..
ತುಮಕೂರು: ಚಿಕ್ಕನಾಯಕನಹಳ್ಳಿ, ಗುಬ್ಬಿ, ತಿಪಟೂರು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜಿಲ್ಲೆಗೆ ಆಗಮಿಸುತ್ತಿದ್ದು, ಮಾಜಿ ಸಚಿವ ಸೊಗಡು ಶಿವಣ್ಣ ಮನೆಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.
ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಿಜೆಪಿಗೆ ರಾಜೀನಾಮೆ ಸಲ್ಲಿಸಿರುವ ಮಾಜಿ ಸಚಿವ ಸೊಗಡು ಶಿವಣ್ಣ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳ ಬೆನ್ನಲ್ಲೇ ಜೆಡಿಎಸ್ ವರಿಷ್ಠ ಹೆಚ್.ಡಿ.ಕುಮಾರಸ್ವಾಮಿ ಸೊಗಡು ಶಿವಣ್ಣ ಮನೆಗೆ ಭೇಟಿ ನೀಡುತ್ತಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
2018ರಲ್ಲಿಯೂ ಮಾಜಿ ಸಚಿವ ಸೊಗಡು ಶಿವಣ್ಣ ಅವರನ್ನು ಜೆಡಿಎಸ್ ಗೆ ಕರೆ ತರುವ ಪ್ರಯತ್ನವನ್ನು ಕುಮಾರಸ್ವಾಮಿ ಅವರು ಮಾಡಿದ್ದರು, ಆಗ ಪಕ್ಷಕ್ಕೆ ಬರಲು ಒಪ್ಪದ ಮಾಜಿ ಸಚಿವ ಸೊಗಡು ಶಿವಣ್ಣ ಬಿಜೆಪಿಯಲ್ಲಿಯೇ ಉಳಿದುಕೊಂಡು ಪಕ್ಷವನ್ನು ಗೆಲ್ಲಿಸಲು ಶ್ರಮಿಸಿದರು.
ಕೊನೆ ಚುನಾವಣೆ ಹೊಸ್ತಿಲಲ್ಲಿ ಇರುವ ಮಾಜಿ ಸಚಿವ ಸೊಗಡು ಶಿವಣ್ಣ ಜೆಡಿಎಸ್ ಸೇರ್ಪಡೆಯಿಂದ ಜಿಲ್ಲೆಯಲ್ಲಿ ಜೆಡಿಎಸ್ ಮತಗಳಿಕೆ ಪ್ರಮಾಣ ಹೆಚ್ಚಾಗುವುದರೊಂದಿಗೆ, ಹಳೇ ಮೈಸೂರು ಪ್ರಾಂತ್ಯದಲ್ಲಿ ಪ್ರಬಲ ವೀರಶೈವ ಲಿಂಗಾಯತ ಮುಖಂಡರಿಲ್ಲದ ಕೊರತೆಯನ್ನು ಸೊಗಡು ಶಿವಣ್ಣ ನಿವಾರಿಸಲಿದ್ದು, ಇದು ಹಳೇ ಮೈಸೂರು ಪ್ರಾಂತ್ಯದಲ್ಲಿ ಲಿಂಗಾಯತ ಸಮುದಾಯದ ಮತಗಳನ್ನು ಸೆಳೆಯಲು ಕಾರಣವಾಗಲಿದೆ ಎಂಬ ಲೆಕ್ಕಾಚಾರ ಜೆಡಿಎಸ್ ವಲಯದಲ್ಲಿದೆ.
ಟಿಕೆಟ್ ಗೆ ಪಟ್ಟು: ಮಾಜಿ ಸಚಿವ ಸೊಗಡು ಶಿವಣ್ಣ ಜೆಡಿಎಸ್ ಸೇರ್ಪಡೆ ಬೆನ್ನಲ್ಲೆ ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದ್ದು, ಈಗಾಗಲೇ ನಗರ ಟಿಕೆಟ್ ಅನ್ನು ಗೋವಿಂದರಾಜು ಅವರಿಗೆ ಘೋಷಣೆ ಮಾಡಿರುವುದು ಕಗ್ಗಟ್ಟಾಂಗಿದೆ.
ಜೆಡಿಎಸ್ ಅಭ್ಯರ್ಥಿಯಾಗಿರುವ ಗೋವಿಂದರಾಜು ಅವರ ಆಡಿಯೊ ಲೀಕ್ ಸೇರಿದಂತೆ ಕ್ಷೇತ್ರದಲ್ಲಿ ಒಲವಿಲ್ಲದೆ ಇರುವುದು, ಹಳೇ ಜೆಡಿಎಸ್ ಕಾರ್ಯಕರ್ತರನ್ನು ಒಟ್ಟಾಗಿ ಕರೆದುಕೊಂಡು ಹೋಗದೇ ಇರುವುದು ಪಕ್ಷಕ್ಕೆ ತಲೆ ನೋವಾಗಿ ಪರಿಣಮಿಸಿದ್ದು, ಅಭ್ಯರ್ಥಿಯನ್ನು ಬದಲಿಸಬೇಕೆಂಬ ಒತ್ತಾಯವೂ ಪಕ್ಷದೊಳಗೆ ಕೇಳಿಬಂದಿದೆ.
ಗೋವಿಂದರಾಜು ಬದಲಿಗೆ ಸೊಗಡು ಶಿವಣ್ಣ ಅವರಿಗೆ ಟಿಕೆಟ್ ನೀಡುವಂತೆ ಜೆಡಿಎಸ್ ನ ಕೆಲ ಮುಖಂಡರು ಹಾಗೂ ಕಾರ್ಯಕರ್ತರು ಕುಮಾರಸ್ವಾಮಿ ಅವರ ಗಮನಕ್ಕೆ ತಂದಿದ್ದು, ಈ ಹಿನ್ನೆಲೆಯಲ್ಲಿ ಸೊಗಡು ಶಿವಣ್ಣ ಮನೆಗೆ ಕುಮಾರಸ್ವಾಮಿ ಅವರು ಭೇಟಿ ನೀಡಿ ಮಾತುಕತೆ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.