ಚುನಾವಣೆ ವೇಳೆ ಕಾಂಗ್ರೆಸ್ ಗೆ ಮುಜುಗರ
ತುಮಕೂರು: ಗುತ್ತಿಗೆದಾರ, ಕಾಂಗ್ರೆಸ್ ಮುಖಂಡ ರಾಯಸಂದ್ರ ರವಿಕುಮಾರ್ ಅವರ ಮೇಲೆ ಸ್ವಪಕ್ಷದ ಶಾಸಕ, ಕೆಎಸ್ ಆರ್ ಟಿಸಿ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ಹಲ್ಲೆ ನಡೆಸಿರುವ ವಿಚಾರ ಜಿಲ್ಲಾ ಕಾಂಗ್ರೆಸ್ ಗೆ ಮುಜುಗರವನ್ನುಂಟು ಮಾಡಿದೆ.
ಚುನಾವಣೆ ಹೊಸ್ತಿಲಲ್ಲಿ ಶುರುವಾಗಿರುವ ವಿವಾದ ಪ್ರತಿಷ್ಠೆಯಾಗಿ ಪರಿಣಮಿಸಿದೆ, ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ರಾಜೀ ಮಾಡಲು ಪ್ರಯತ್ನಿಸಿದರು ಸಫಲವಾಗಲಿಲ್ಲ, ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಹಾಗೂ ಬಿಜೆಪಿ ಮುಖಂಡರು ರಾಯಸಂದ್ರ ರವಿಕುಮಾರ್ ಭೇಟಿ ಮಾಡಿದ್ದು, ಘಟನೆಯನ್ನು ಈ ಮೂಲಕ ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಂಡಿದೆ.
ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರ ನೀಲಿಕಣ್ಣಿನ ಹುಡುಗ ರಾಯಸಂದ್ರ ರವಿಕುಮಾರ್ ಕಳೆದ ಚುನಾವಣೆಯಲ್ಲಿ ಸಕ್ರಿಯವಾಗಿ ಪಕ್ಷಕ್ಕಾಗಿ ದುಡಿದವರು, ವಿದ್ಯಾರ್ಥಿ ನಾಯಕನಾಗಿ ರಾಜಕೀಯ ಹಾದಿ ತುಳಿದ ರವಿ, ಕೆಜೆಪಿ, ಬಿಜೆಪಿಯಿಂದ ಕೊನೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ, ಪಕ್ಷದ ಸೈದ್ಧಾಂತಿಕ ವಿಚಾರಗಳನ್ನು ಸಮರ್ಥವಾಗಿ ಮಂಡಿಸುತ್ತಿದ್ದರಿಂದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ಅರಸಿ ಬಂದಿತ್ತು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಮುಖ್ಯ ಕಾರಣವಾಗಿರುವ 40 ಕಮೀಷನ್ ವಿಚಾರವನ್ನು ಜಿಲ್ಲೆಯಲ್ಲಿ ತಾರಕಕ್ಕೆ ಕೊಂಡೊಯ್ಯುವಲ್ಲಿಯೂ ರವಿ ಪಾತ್ರ ಗಣನೀಯವಾಗಿದೆ, ಕಾಂಗ್ರೆಸ್ ನೊಂದಿಗೆ ಗುರುತಿಸಿಕೊಂಡ ಕಾರಣಕ್ಕೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆಯನ್ನು ಪಡೆಯಲಾಗದೇ, ಪಕ್ಷಕ್ಕಾಗಿ ದುಡಿದ ಕಾರಣದಿಂದಲೇ ನಿಗಮ ಮಂಡಳಿ ನೇಮಕಾತಿಯಲ್ಲಿ ರವಿಗೆ ಅವಕಾಶ ಸಿಗಲಿದೆ ಎನ್ನುವ ಮಾತುಗಳು ಕೇಳಿಬಂದಿದ್ದವು.
ನಾಲ್ಕೈದು ವರ್ಷಗಳಿಂದ ಕಾಮಗಾರಿಯನ್ನೇ ಮಾಡದ ಪ್ರಥಮ ದರ್ಜೆ ಗುತ್ತಿಗೆದಾರ ರವಿಕುಮಾರ್ ಕಳೆದ ಸೆಪ್ಟೆಂಬರ್ ನಲ್ಲಿ ಗಣಿ ಪ್ರದೇಶಾಭಿವೃದ್ಧಿ ಯೋಜನೆಯಡಿ 15 ಕೋಟಿಗೂ ಹೆಚ್ಚಿನ ಮೊತ್ತದ ಗುಬ್ಬಿ ತಾಲ್ಲೂಕಿನ ಎರಡು, ತಿಪಟೂರು ತಾಲ್ಲೂಕಿನ ಒಂದು ಕಾಮಗಾರಿಗೆ ಟೆಂಡರ್ ಮೂಲಕ ಬಿಡ್ ಸಲ್ಲಿಸಿದ್ದರು, ಕಡಿಮೆ ಬಿಡ್ ಸಲ್ಲಿಸಿದ್ದ ಕಾರಣಕ್ಕೆ ಮೂರು ಟೆಂಡರ್ ಗಳು ರವಿಕುಮಾರ್ ಅವರಿಗೆ ಸಿಕ್ಕಿದ್ದವು.
ಆದರೆ ಜಿಲ್ಲಾ ಪಂಚಾಯತ್ ಕಾರ್ಯಪಾಲಕ ಎಂಜಿನಿಯರ್ ತಿಮ್ಮರಾಯಪ್ಪ ಟೆಂಡರ್ ಕರಾರು ಮಾಡಿಕೊಡದೇ ಏಕಾಏಕಿ ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸಿದ್ದರ ವಿರುದ್ಧ ರಾಯಸಂದ್ರ ರವಿಕುಮಾರ್ ಪ್ರತಿಭಟನೆ ನಡೆಸುತ್ತಿದ್ದರು. ತಡರಾತ್ರಿ 11 ಗಂಟೆ ಸುಮಾರಿಗೆ ಶಾಸಕ ಶ್ರೀನಿವಾಸ್ ಬೆಂಬಲಿಗರೊಂದಿಗೆ ಆಗಮಿಸಿ ಪ್ರತಿಭಟನೆ ನಡೆಸುತ್ತಿದ್ದ ರವಿಕುಮಾರ್ ಮೇಲೆ ಸೀನಿಮಯ ಶೈಲಿಯಲ್ಲಿ ಹಲ್ಲೆ ನಡೆಸಿ, ಧಮ್ಕಿ ಹಾಕಿದ್ದರು.
ಎಸ್.ಆರ್.ಶ್ರೀನಿವಾಸ್ ಅವರು ರಾಯಸಂದ್ರ ರವಿಕುಮಾರ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದು 48 ಗಂಟೆಗಳ ಬಳಿಕ ಎಫ್‌ಐಆರ್ ದಾಖಲಾಗಿದೆ. ಘಟನೆ ನಡೆದ ಗುರುವಾರ ರಾತ್ರಿ ಜಿಲ್ಲಾಸ್ಪತ್ರೆಯಲ್ಲೇ ಪೊಲೀಸರು ಹಲ್ಲೆಗೊಳಗಾದ ರವಿಕುಮಾರ್ ಅವರ ಹೇಳಿಕೆ ದಾಖಲಿಸಿಕೊಂಡಿದ್ದರು. ಆದರೆ ಪೊಲೀಸರು ಎಫ್‌ಐಆರ್ ದಾಖಲಿಸಿರಲಿಲ್ಲ.
ಶನಿವಾರ ರಾತ್ರಿ 8 ಗಂಟೆಗೆ ಐಪಿಸಿ ಸೆಕ್ಷನ್ 511, 506,504,143,149, 323,363 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಈ ಕುರಿತು ತಿಲಕ್ ಪಾರ್ಕ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.