ಮಧುಗಿರಿ : 34 ಸಾವಿರ ಕೋಟಿ ರೂಪಾಯಿಯಷ್ಟು ಬೆಳೆಗಳು ನಷ್ಟವಾಗಿದೆ ಎಂದು ಕೇಂದ್ರಕ್ಕೆ ಮಾಹಿತಿ ನೀಡಲಾಗಿದ್ದರೂ ಇನ್ನೂ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಲು ಮುಂದಾಗಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ತಿಳಿಸಿದರು.
ಪಟ್ಟಣದ ಗೌರಿಬಿದನೂರು ರಸ್ತೆಯ ಸಮೀಪವಿರುವ ಕೃಷಿ ಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದ ವತಿಯಿಂದ ಆಯೋಜಿಸಲಾಗಿದ್ದ ರಾಗಿ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರ್ಕಾರದ ಅಧಿಕಾರಿಗಳು ರಾಜ್ಯದಲ್ಲಿನ ಬರ ಪರಿಸ್ಥಿತಿಯನ್ನು ವೀಕ್ಷಣೆ ಮಾಡಿದ್ದರು ರಾಜ್ಯದ ರೈತರಿಗೆ ಏನೂ ಪ್ರಯೋಜನವಾಗಿಲ್ಲ. ಈ ಬಾರಿ ರಾಜ್ಯದಲ್ಲಿ ಬರಗಾಲ ಎದುರಾಗಿದ್ದು 174 ತಾಲೂಕುಗಳು ಬರಪೀಡಿತ ಪ್ರದೇಶಗಳಾಗಿವೆ. ರಾಜ್ಯ ಸರ್ಕಾರವು ರೈತರ ಪರವಾಗಿದ್ದು ಬರಗಾಲದ ಹಿನ್ನೆಲೆಯಲ್ಲಿ ಎಕರೆಗೆ 2 ಸಾವಿರ ರೂಗಳನ್ನು ನಿಗಧಿ ಮಾಡಿ ರೈತರಿಗೆ ನೀಡಲು ಮುಂದಾಗಿದೆ. ರೈತರು ಕಷ್ಟ ಪಟ್ಟು ಬೆಳೆದ ಬೆಳೆಗಳನ್ನು ಖರೀದಿಸುವಾಗ ಅಧಿಕಾರಿ ಗಳು ಮಾನವಿಯತೆಯನ್ನು ತೋರಬೇಕು ಆದರೆ ಕಳಪೆ ಗುಣಮಟ್ಟದ ರಾಗಿ ಖರೀದಿ ಬೇಡಾ , ಎತ್ತಿನಹೊಳೆ ಯೋಜನೆಯು ಇನ್ನೆರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಜಿಲ್ಲೆಯ ತಾಲೂಕಗಳಲ್ಲಿನ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ನೀಡಲು ರಾಜ್ಯ ಸರ್ಕಾರ ಕ್ರಮ ವಹಿಸಲಿದೆ.
ನೊಂದಾಯಿತ ರೈತರು ರಾಗಿ ಖರೀದಿ ಕೇಂದ್ರಗಳಿಗೆ ರಾಗಿ ತರುವ ಜವಾಬ್ದಾರಿ ನಿಮ್ಮದಾಗಿದೆ. ಪತ್ರಿಕೆಯೊಂದರಲ್ಲಿ ಕುಮಾರಸ್ವಾಮಿಯೊಬ್ಬರೆ 800 ಕೋಟಿ ರೂಪಾಯಿಗಳನ್ನು ರೈತರ ಸಾಲ ಮನ್ನಾ ಮಾಡಿದ್ದಾರೆಂದು ಬರೆಯಲಾಗಿತ್ತು. ಸಾಲಮನ್ನಾ ಮಾಡುವಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ , ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ರವರುಗಳು ಪ್ರಮುಖ ಪಾತ್ರವಹಿಸಿದ್ದಾರೆ. ರೈತರ ಬೇಡಿಕೆಗಳ ಬಗ್ಗೆ ಗಮನ ಹರಿಸಲಾಗುವುದು ಎಂದು ಭರವಸೆ ನೀಡಿದರು.
ರೈತ ಮುಖಂಡ ಶಂಕರಪ್ಪ ಜಿ.ಸಿ ಮಾತನಾಡಿ ಎಂ ಎಸ್ ಪಿ ವ್ಯಾಪ್ತಿಗೆ ಎಲ್ಲಾ ಬೆಳೆಗಳನ್ನು ಸೇರಿಸ ಬೇಕು , ಕೇಂದ್ರ ಸರ್ಕಾರವು ಈಗ ಕೇವಲ 16 ಮಾತ್ರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿದೆ. ಸರ್ಕಾರದ ನಿಯಮಗಳು ರೈತ ಪರವಾಗಿದ್ದರೆ ಮಾತ್ರ ಕೃಷಿ ಅಭಿವೃದ್ಧಿ ಕಾಣಲಿದೆ. ಬಿಜೆಪಿ ಸರ್ಕಾರ ರೈತ ವಿರೋಧಿ ಕಾನೂನುಗಳನ್ನು ಜಾರಿ ಮಾಡಿತ್ತು. ವಿದ್ಯುತ್ ಕ್ಷೇತ್ರವನ್ನು ಸಾರ್ವಜನಿಕ ವಲಯದಲ್ಲಿಯೇ ಉಳಿಸಬೇಕು.ಖಾಸಗೀಕರಣಗೊಳಿಸಬಾರದು , ತಾಲೂಕಿನ ಕೆಲಭಾಗಗಳಲ್ಲಿ ಹಾಗೂ ಆಂದ್ರ ಗಡಿಗಳಲ್ಲಿ ಹೆಚ್ಚಾಗಿರುವ ಹುಣೆಸೆ ಬೆಳೆಗಾರರನ್ನು ಸಂರಕ್ಷಣೆ ಮಾಡಿ ಎಂ ಎಸ್ ಪಿ ಪಟ್ಟಿಗೆ ಹುಣಸೆ ಬೆಳೆಯನ್ನು ಸೇರಿಸ ಬೇಕು. ರಾಗಿ ಖರೀದಿ ಕೇಂದ್ರಗಳು ವರ್ಷ ಪೂರ್ತಿ ಕಾರ್ಯ ನಿರ್ವಹಿಸಬೇಕು , ತಾಲೂಕಿಗೊಂದು ಶೈತ್ಯಗಾರ (ಕೋಲ್ಡ್ ಸ್ಟೋರೇಜ್) ನಿರ್ಮಾಣ ಮಾಡಬೇಕು , ನೈಸರ್ಗಿಕ ಕೃಷಿಗೆ ಸರ್ಕಾರ ಪೂರಕ ವಾತಾವರಣ ಸೃಷ್ಟಿಸಬೇಕೆಂದರು.
ಸಹಾಯಕ ನಿರ್ದೇಶಕ ಹನುಮಂತರಾಯಪ್ಪ ಮಾತನಾಡಿ ಈಗಾಗಲೇ ರಾಗಿ ಖರೀದಿ ಕೇಂದ್ರಕ್ಕೆ 32 ಜನ ಆರ್ಹ ಫಲಾನುಭವಿಗಳು ರಾಗಿ ನೀಡಲು ಮುಂದೆ ಬಂದಿದ್ದಾರೆ. ಕ್ವಿಂಟಾಲ್ ರಾಗಿಗೆ 3846 ರೂ ದರವನ್ನು ನಿಗದಿ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ರೈತರು ನೊಂದಾಯಿಸಿ ಕೊಳ್ಳಲಿದ್ದಾರೆ. ರಾಗಿ ಖರೀದಿಗಾಗಿ ಮೌಲ್ಯ ಮಾಪಕರನ್ನು ಈಗಾಗಲೇ ನೇಮಿಸಲಾಗಿದೆ ಎಂದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಆಶಾ ಆಹಾರ ಇಲಾಖೆ ಶಿರಸ್ತೆದಾರ್ ಸುಜಾತ , ಗೋದಾಮು ವ್ಯವಸ್ಥಾಪಕ ಮುನಿರಾಜು , ವರ್ತಕರುಗಳಾದ ಲಕ್ಷ್ಮೀನರಸೇಗೌಡ, ನರಸಿಂಹಮೂರ್ತಿ , ಶಿಕ್ಷಣ ಸಂಯೋಜಕ ಪ್ರಾಣೇಶ್ , ಶಿಕ್ಷಕ ದಾಸಣ್ಣ , ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಪೋತರಾಜು , ರೈತರು ಹಾಗೂ ಮತ್ತಿತರರು ಹಾಜರಿದ್ದರು.