ತುಮಕೂರು: ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯನ್ನು ಕೊಂದು ಮನೆಯ ಪಕ್ಕದಲ್ಲಿಯೇ ಹೂತಿಟ್ಟಿದ್ದ ಪ್ರಕರಣ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮುದ್ದರಾಮಯ್ಯನ ಪಾಳ್ಯದಲ್ಲಿ ಬೆಳಕಿಗೆ ಬಂದಿದೆ.
ಕೊರಟಗೆರೆ ತಾಲ್ಲೂಕು ನಾಗೇನಹಳ್ಳಿಯ ಸಿದ್ದಗಂಗಮ್ಮ (45) ಅವರಿಗೆ ತುಮಕೂರು ತಾಲ್ಲೂಕು ಕೋರಾ ಹೋಬಳಿ ಮುದ್ದರಾಮಯ್ಯನ ಪಾಳ್ಯದ ನಂಜುಂಡಪ್ಪನೊಂದಿಗೆ ಅಕ್ರಮ ಸಂಬಂಧ ಇದ್ದು, ಕಳೆದ ಮಂಗಳವಾರ ಸಿದ್ಧಗಂಗಮ್ಮನನ್ನು ಕೊಂದು ಅಡಿಕೆ ನಾಟಿ ಮಾಡಲು ಕೊರೆಸಿದ್ದ ಟ್ರಂಚ್ ನಲ್ಲಿ ಹೂತು ಹಾಕಿದ್ದ ಎಂದು ತಿಳಿದು ಬಂದಿದೆ.

ನಾಪತ್ತೆ ಪ್ರಕರಣ ಕೊಲೆಯಲ್ಲಿ ಅಂತ್ಯ: ನಾಗೇನಹಳ್ಳಿ ಗ್ರಾಮದ ಸಿದ್ಧಗಂಗಮ್ಮ ಒಂದು ವಾರದ ಹಿಂದೆ ಮನೆಯಿಂದ ಹೋದವರು ವಾಪಾಸ್ ಬಂದಿಲ್ಲ ಎಂದು ಸಿದ್ಧಗಂಗಮ್ಮ ಅವರ ಮಗ ಕೊರಟಗೆರೆ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರಿಗೆ ನಂಜುಂಡಪ್ಪ ಬಗ್ಗೆ ಅನುಮಾನಗೊಂಡು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿ ಹೂತಿಟ್ಟಿರುವ ವಿಚಾರ ಬಾಯಿ ಬಿಟ್ಟಿದ್ದಾನೆ.
ಹೆಂಡತಿ, ಮಕ್ಕಳಿದ್ದರು ಸಹ ಊರಿನಲ್ಲಿರುವ ಮನೆಯನ್ನು ಬಿಟ್ಟು ಊರ ಹೊರಗೆ ಇರುವ ಹೊಲದಲ್ಲಿ ಮನೆ ಕಟ್ಟಿಕೊಂಡು ಒಂಟಿಯಾಗಿ ವಾಸವಿದ್ದ ನಂಜುಂಡಪ್ಪನ ಬಳಿಗೆ ಸಿದ್ಧಗಂಗಮ್ಮ ಬಂದಿದ್ದು, ಕಳೆದ ಮಂಗಳವಾರ ಕ್ಷುಲ್ಲಕ ಕಾರಣಕ್ಕೆ ತಡರಾತ್ರಿ ಇಬ್ಬರ ನಡುವೆ ಜಗಳವಾಗಿದ್ದು, ಈ ವೇಳೆ ನಂಜುಂಡಪ್ಪ ಹೊಡೆದಿದ್ದರಿಂದ ಸಿದ್ಧಗಂಗಮ್ಮ ಅಲ್ಲಿಯೇ ಪ್ರಾಣಬಿಟ್ಟಿದ್ದಾಳೆ.

ಹೊಲದಲ್ಲಿ ಹೊಸದಾಗಿ ಅಡಿಕೆ ನಾಟಿ ಮಾಡಲು ಕೊರೆಸಿದ್ದ ಟ್ರಂಚ್ ಗೆ ಸಿದ್ಧಗಂಗಮ್ಮ ಅವರನ್ನು ಹೂತು ಹಾಕಿದ್ದ, ಕೊರಟಗೆರೆ ಪೊಲೀಸರ ವಿಚಾರಣೆಯ ವೇಳೆ ಸತ್ಯಾಂಶ ಬೆಳಕಿಗೆ ಬಂದಿದ್ದರಿಂದ ಭಾನುವಾರ ಬೆಳಂಬೆಳಿಗ್ಗೆ ಕೊರಟಗೆರೆ, ತುಮಕೂರು ಗ್ರಾಮಾಂತರ ಪೊಲೀಸರು ಮುದ್ದರಾಮಯ್ಯನಪಾಳ್ಯಕ್ಕೆ ಭೇಟಿ ನೀಡಿದ ಮೇಲೆ ಗ್ರಾಮಸ್ಥರಿಗೆ ಕೊಲೆ ವಿಚಾರ ಗೊತ್ತಾಗಿದೆ.
ತುಮಕೂರು ಗ್ರಾಮಾಂತರ ಸರ್ಕಲ್ ಇನ್ ಸ್ಪೆಕ್ಟರ್ ಪುಟ್ಟೇಗೌಡ, ಸಬ್ ಇನ್ ಸ್ಪೆಕ್ಟರ್ ಮೋಹನ್, ಕೊರಟಗೆರೆ ಸರ್ಕಲ್ ಇನ್ ಸ್ಪೆಕ್ಟರ್ ಅನಿಲ್ ಕುಮಾರ್, ಸಬ್ ಇನ್ ಸ್ಪೆಕ್ಟರ್ ಬಸವರಾಜು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ತುಮಕೂರು ಉಪವಿಭಾಗಾಧಿಕಾರಿ ನಾಹೀದಾ ಜಮ್ ಜಮ್ ಸಮ್ಮುಖದಲ್ಲಿ ಮೃತ ಶವವನ್ನು ತೆಗೆದು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲು ಪೊಲೀಸರು ಮುಂದಾಗಿದ್ದಾರೆ.