ತುಮಕೂರು: ಬದುಕಿಗೆ ಶಿಕ್ಷಣ ಎಷ್ಟು ಮುಖ್ಯವೋ ಅಷ್ಟೇ ಪರಿಸರದ ಶಿಕ್ಷಣವೂ ಕೂಡ ಮುಖ್ಯವಾಗಿದ್ದು, ಗಿಡಮರಗಳ ಬಗ್ಗೆ ಕಾಳಜಿಯಿದ್ದರೆ ಮುಂದಿನ ತಲೆಮಾರಿನ ಪರಿಸರ ನಾಶದ ಬಗ್ಗೆ ಆತಂಕ ಪಡುವಂತಿಲ್ಲ ಎಂದು ಸಿದ್ಧಗಂಗಾ ಆಸ್ಪತ್ರೆ ಮೆಡಿಕಲ್ ಕಾಲೇಜು ಕಾರ್ಯಕಾರಿ ನಿರ್ದೇಶಕ ಡಾ.ಸಚ್ಚಿದಾನಂದ್ ರವರು ತಿಳಿಸಿದರು.
ಅವರು ತುಮಕೂರು ತಾಲ್ಲೂಕಿನ ಸ್ವಾಂದೇನಹಳ್ಳಿ ಗ್ರಾಮದಲ್ಲಿ ಸ್ವಚ್ಛಭಾರತ ಅಭಿಯಾನದ ಅಡಿಯಲ್ಲಿ ನಡೆದ ಸ್ವಚ್ಛಭಾರತ ಪಕ್ವಾಡದ ಅಂಗವಾಗಿ ವನಮಹೋತ್ಸವ ಹಾಗೂ ಗ್ರಾಮಸ್ವಚ್ಛ ಕಾರ್ಯಕ್ರಮವನ್ನು ಗಿಡ ನಡುವುದರ ಮೂಲಕ ಉದ್ಘಾಟಿಸಿ ಮಾತನಾಡಿ ಪ್ರತಿಯೊಬ್ಬರೂ ತಮ್ಮ ಇಡೀ ಜೀವನದಲ್ಲಿ ತಮ್ಮ ನೆನಪಿನಾರ್ಥವಾಗಿ ಒಂದು ಗಿಡವನ್ನು ಬೆಳೆಸುವ ಪ್ರತಿಜ್ಞೆ ಕೈಗೊಂಡರೆ ಪರಿಸರಕ್ಕೆ ಅಮೂಲ್ಯ ಕೊಡುಗೆ ನೀಡಬಹುದು ಎಂದರು.
ಪ್ರಾಚಾರ್ಯರಾದ ಡಾ.ಶಾಲಿನಿ ಮಾತನಾಡಿ ವ್ಯಕ್ತಿಯ ತನ್ನ ಆರೋಗ್ಯದ ಜೊತೆಗೆ ಪರಿಸರದ ಆರೋಗ್ಯ ಕಾಪಾಡುವುದು ಕೂಡ ಮುಖ್ಯವಾಗಿದೆ. ಇಂದಿನ ಹೊಸ ತಲೆಮಾರಿನ ವೈದ್ಯರಿಗೆ ಪರಿಸರ ಹಾಗೂ ಗ್ರಾಮೀಣ
ಆರೋಗ್ಯದ ಬಗ್ಗೆ ಅರ್ಥಮಾಡಿಸಲು ಇಂತಹ ಸ್ವಚ್ಛಭಾರತ ಕಾರ್ಯಕ್ರಮಗಳು ಅನಕೂಲ ಎಂದರು.
ಗ್ರಾಮದಲ್ಲಿ ಗಿಡವನ್ನು ನಡುವ ಮೂಲಕ ಪರಿಸರ ಕಾಳಜಿ ಮೆರೆದ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು.
ಮೆಡಿಕಲ್ ಮೇಲ್ವಿಚಾರಕ ಡಾ.ನಿರಂಜನಮೂರ್ತಿ, ಕಮ್ಯೂನಿಟಿ ಮೆಡಿಸಿನ್ ವಿಭಾಗದ ಡಾ.ರಾಜೇಶ್, ಡಾ.ವಿದ್ಯಾ,ಡಾ.ಲತಾ,ಪಿಆರ್ ಓ ಕಾಂತರಾಜು ಉಪಸ್ಥಿತರಿದ್ದರು.