ಹೆಲಿಕ್ಯಾಪ್ಟರ್ ನಿಂದ ಬಳ್ಳಾರಿ ಸೌಂದರ್ಯ ಸವಿಯಿರಿ: ಡಿಸಿ ಪವನ್‍ಕುಮಾರ್

ಗಿರೀಶ್
2 Min Read

ಬಳ್ಳಾರಿಯ ಐತಿಹಾಸಿಕ ಸ್ಥಳಗಳು ಹಾಗೂ ಮನೋರಮಣೀಯ ಬೆಟ್ಟ, ಗುಡ್ಡಗಳ ದೃಶ್ಯಗಳನ್ನು ಅಗಸದಿಂದ ವೀಕ್ಷಿಸಲು ಉತ್ಸವದ ಅಂಗವಾಗಿ ಆಯೋಜಿಸಲಾಗಿರುವ ಬಳ್ಳಾರಿ ಬೈಸ್ಕೈ ನಲ್ಲಿ ಪ್ರತಿಯೊಬ್ಬರೂ ಹಾರಾಟ ಮಾಡಿ ಆನಂದಿಸಿ ಎಂದು ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಕರೆ ನೀಡಿದರು.

ಬಳ್ಳಾರಿ ಜಿಲ್ಲಾಡಳಿತ ವತಿಯಿಂದ ಮೊದಲ ಬಾರಿಗೆ ನಡೆಸಲಾಗುತ್ತಿರುವ ಬಳ್ಳಾರಿ ಉತ್ಸವದ ಅಂಗವಾಗಿ ಆಗಸದಿಂದ ಬಳ್ಳಾರಿಯನ್ನು ವೀಕ್ಷಿಸಲು ನಗರದ ಕೊಳಗಲ್ ವಿಮಾನ ನಿಲ್ದಾಣದಿಂದ ಬಳ್ಳಾರಿ ಬೈಸ್ಕೈಗೆ ಗುರುವಾರ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.

ಬೈಸ್ಕೈನಲ್ಲಿ ಸ್ವತಃ ಜಿಲ್ಲಾಧಿಕಾರಿಗಳೇ ಹೆಲಿಕಾಪ್ಟರ್‍ನಲ್ಲಿ ಪ್ರಯಾಣಿಸಿ ತಮ್ಮ ಅನುಭವವನ್ನು ಹಂಚಿಕೊಂಡರು. ಈ ಹಿಂದೆ ಹಂಪಿ ಉತ್ಸವದಲ್ಲಿ ಬೈಸ್ಕೈ ಇರುತ್ತಿತ್ತು. ಈಗ ಮೊದಲ ಬಾರಿಗೆ ಪ್ರವಾಸೋದ್ಯಮ ಇಲಾಖೆ ಮತ್ತು ತುಂಬೆ ಏವಿಯೇಷನ್ ಇವರ ಸಂಯುಕ್ತಾಶ್ರಯದಲ್ಲಿ ಚೊಚ್ಚಲ ಉತ್ಸವದ ಪ್ರಯುಕ್ತ ಬಳ್ಳಾರಿ ನಗರದಲ್ಲಿ ಆಯೋಜಿಸಲಾಗಿದೆ. ಈ ಬೈಸ್ಕೈಯುು ಉತ್ಸವಕ್ಕೆ ನಗರದ ಜನತೆಯ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದರು.

ಬೈಸ್ಕೈನಲ್ಲಿ ಹೆಲಿಕಾಪ್ಟರ್ ಮೂಲಕ 15 ನಿಮಿಷಗಳ ಕಾಲ ಆಗಸದಿಂದ ಬಳ್ಳಾರಿಯ ಪ್ರಸಿದ್ಧ ಸ್ಥಳಗಳಾದ ತುಮಟಿಯ ಐತಿಹಾಸಿಕ ಬ್ರಿಟಿಷ್ ಬಂಗಲೆ ಹಾಗೂ ಸಾಲು ಬೆಟ್ಟ, ಬಳ್ಳಾರಿ ಕೋಟೆ, ಸಂಗನಕಲ್ಲು ಗುಡ್ಡ ಸೇರಿದಂತೆ ನಗರವನ್ನು ವೀಕ್ಷಿಸಿಸಬಹುದಾಗಿದೆ.

ಹೆಲಿಕಾಪ್ಟರ್‍ನಲ್ಲಿ ಒಂದು ಭಾರಿಗೆ 6 ಪ್ರಯಾಣಿಕರು ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದ್ದು ಒಬ್ಬರಿಗೆ ರೂ.3500 ದರ ನಿಗದಿಪಡಿಸಲಾಗಿದೆ. ಸಾರ್ವಜನಿಕರು ಹೆಲಿಕಾಪ್ಟರ್‍ನಲ್ಲಿ ಸಂಚರಿಸಿ ನಗರ ಸೇರಿದಂತೆ ಐತಿಹಾಸಿಕ ಮನೋರಮಣಿಯ ದೃಶ್ಯಗಳನ್ನು ನೋಡಿ ಆನಂದಿಸಬಹುದಾಗಿದೆ ಎಂದು ಹೇಳಿದರು.

ಈ ಬೈಸ್ಕೈಯು ಇಂದಿನಿಂದ ಜ.23 ರವರೆಗೆ ಆಯೋಜಿಸಲಾಗಿದ್ದು, ಬೆಳಗ್ಗೆ 7ರಿಂದ ಸಂಜೆ 4 ರವರೆಗೆ ನಡೆಯಲಿದೆ. ಹವಮಾನ ನೋಡಿಕೊಂಡು ಕಾಲಾವಧಿಯನ್ನು ವಿಸ್ತರಿಸಲಾಗುವುದು. ಅದರಂತೆಯೇ ಜನರ ಆಸಕ್ತಿಯ ಮೇರೆಗೆ ಇನ್ನೊಂದು ಹೆಲಿಕಾಪ್ಟರ್ ತರಿಸಲು ತೀರ್ಮಾನಿಸಲಾಗುವುದು ಎಂದರು.

ಟಿಕೇಟ್ ಆನ್‍ಲೈನ್ ಮತ್ತು ಆಫ್‍ಲೈನ್ ಎರಡು ವಿಧದಲ್ಲಿದ್ದು, ಸಾರ್ವಜನಿಕರು ನೊಂದಣಿಗಾಗಿ https://helitaxii.com/ ಗೆ ಭೇಟಿ ನೀಡಬಹುದು ಅಥವಾ ಮಾಹಿತಿಗಾಗಿ ಮೊ.9620301866 ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ಎಂ.ರಾಜೇಶ್ವರಿ, ಸಹಾಯಕ ಆಯುಕ್ತರಾದ ಹೇಮಂತ್, ತಹಶೀಲ್ದಾರ ವಿಶ್ವನಾಥ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರಾದ ಡಾ.ಎಸ್.ತಿಪ್ಪೇಸ್ವಾಮಿ, ತುಂಬೆ ಏವಿಯೇಷನ್ ಸಿಬ್ಬಂದಿ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಇತರರು ಇದ್ದರು

Share this Article
Verified by MonsterInsights