ತುಮಕೂರು: ಗ್ರಾಮಾಂತರದ ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೇ ಬಿಜೆಪಿಗೆ ಮತಹಾಕಿದರೆ ಗ್ರಾಮಾಂತರ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದು ಮಾಜಿ ಶಾಸಕ ಬಿ.ಸುರೇಶ್ ಗೌಡ ಭರವಸೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಬಳಿ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅವರು ನಕಲಿ ಬಾಂಡ್ ಹಂಚಿ ಹೈಕೋರ್ಟ್ ನಿಂದ ಅಸಿಂಧುಗೊಂಡಿರುವ ಶಾಸಕರಿಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ, ಚುನಾವಣೆಯಲ್ಲಿ ಗೆದ್ದರು ಸಹ ಮುಖ್ಯಮಂತ್ರಿ ಆಯ್ಕೆ ಮಾಡಲು ಮತ ಹಾಕದಂತೆ ನಿರ್ಬಂಧಿಸಿದೆ ಅದ್ಯಾವ ಮುಖ ಇಟ್ಕೊಂಡು ಮತ ಕೇಳೋಕೆ ಬರ್ತಾರೆ ಗೊತ್ತಿಲ್ಲ ಎಂದು ಟೀಕಿಸಿದರು
ಗ್ರಾಮಾಂತರ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿಗೆ ಮತ ಹಾಕಿ, ಬಿಜೆಪಿ ಗೆಲ್ಲಬೇಕೆಂದರೆ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಸಕ್ರಿಯರಾಗಿ ಕೆಲಸ ಮಾಡಬೇಕು, ಬೂತ್ ಗೆದ್ದರೆ ಕ್ಷೇತ್ರ ಗೆದ್ದಂತೆ , 226 ಬೂತ್ ಗಳಲ್ಲಿ ಕಾರ್ಯಕರ್ತರು ಬಿಜೆಪಿಯನ್ನು ಗೆಲ್ಲಿಸಿದರೆ, ಗ್ರಾಮಾಂತರದಲ್ಲಿ 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಬಿಜೆಪಿ ಗೆಲ್ಲಲಿದೆ ಎಂದರು.
ಗ್ರಾಮಾಂತರ ಕ್ಷೇತ್ರದಲ್ಲಿದ್ದ 18 ಶಾಲೆಗಳನ್ನು ನಿರ್ವಹಣೆ ಮಾಡಲಾಗದೇ ಹಾಳು ಮಾಡಿದ ಹಾಲಿ ಶಾಸಕರ ಬಗ್ಗೆ ಬಿಜೆಪಿ ಕಾರ್ಯಕರ್ತರು ಟೀಕೆ ಮಾಡಬೇಕು, ಕಾರ್ಯಕರ್ತರನ್ನು ಟಾರ್ಗೆಟ್ ಮಾಡಬೇಡಿ ಎಂದು ಸಲಹೆ ನೀಡಿದರು.
ಈ ವೇಳೆ ಬಿಜೆಪಿ ತಾಲ್ಲೂಕು ಅಧ್ಯಕ್ಷ ಶಂಕರಣ್ಣ, ನರಸಿಂಹಮೂರ್ತಿ, ರಾಮಚಂದ್ರಪ್ಪ, ಅರಕೆರೆ ರವೀಶ್, ವೈ.ಟಿ.ನಾಗರಾಜು, ವೈ.ಎಚ್.ಹುಚ್ಚಯ್ಯ, ರಮೇಶ್, ಆರೀಫ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಮುಖಂಡರು ಉಪಸ್ಥಿತರಿದ್ದರು.