ಮಧುಗಿರಿ: ಒಂಬತ್ತು ಜನ ಸಹೋದರ ಸಹೋದರಿಯರಿಂದ ತಮ್ಮ ವಂಶಕ್ಕೆ ಅಂಟಿರುವ ಯಾವುದೋ ಸಮಸ್ಯೆಯ ಪರಿಹಾರಕ್ಕಾಗಿ ಧಾರ್ಮಿಕ ವಿಧಿ ವಿಧಾನದಂತೆ ಒಂಬತ್ತು ಹಸುಗಳನ್ನು ದಾನ ಮಾಡಲು ಮುಂದಾಗಿದ್ದಾರೆ.
ತಾಲೂಕಿನ ಐಡಿ ಹಳ್ಳಿ ಹೋಬಳಿಯ ಹೊಸ ಇಟಕ ಲೂಟಿ ಗ್ರಾಮದಲ್ಲಿ ಪೂಜೆ ಸಲ್ಲಿಸಿ ತಾವು ತಂದಿರುವ 9 ಹಸುಗಳನ್ನು ಮನೆದೇವರಾದ ಮೊಸರಪುಡಿ ಆಂಜನೇಯನಿಗೆ ದಾನ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.
7 ನೇ ಮಗಳಾದ ಪದ್ಮಾವತಮ್ಮ ಹೇಳುವಂತೆ ಈ ಗ್ರಾಮವು ಹಿಂದೆ ಪಂಚವಟಿ ಗ್ರಾಮವಾಗಿದ್ದು, ಈಗ ಎಲ್ಲೊಟಿ, ಹೊಸ ಇಟಕಲೋಟಿ, ಜನಕಲೋಟಿ, ಹಳೆಇಟಕಲೋಟಿ, ಹಾಗೂ ತುಂಡೋಟಿ ಎಂದು ಈಗ 5 ಗ್ರಾಮಗಳಾಗಿವೆ. ಹಿಂದೆ ಇಲ್ಲಿ ಪಾಂಡವರು ತಮ್ಮ ವನವಾಸದ ವೇಳೆ ಶಸ್ತ್ರಾಸ್ತ್ರಗಳನ್ನು ಇಲ್ಲಿ ಇಟ್ಟಿದ್ದರು. ಎಂಬ ಪ್ರತೀತಿ ಇದೆ.
ಈ ಗ್ರಾಮದಲ್ಲಿ ರಾಮಯ್ಯ ಹಾಗೂ ನಾರಾಯಾಣಮ್ಮ ದಂಪತಿಗಳಿಗೆ ಒಂಬತ್ತು ಮಕ್ಕಳು ಜನಿಸಿದ್ದು 5 ಹೆಣ್ಣು ನಾಲ್ಕು ಗಂಡು ಮಕ್ಕಳು ಜನಿಸಿದ್ದರು. ರಾಮಯ್ಯ (110) ಕಾಲವಾಗಿದ್ದು ನಾರಯಣಮ್ಮ (98) ಇನ್ನೂ ಬದುಕಿದ್ದಾರೆ. ಇದರಲ್ಲಿ 5 ಹೆಣ್ಣು ಮಕ್ಕಳು ಪಾಂಡವರಂತೆ, 4 ಗಂಡು ಮಕ್ಕಳು ರಾಮ, ಲಕ್ಷ್ಮಣ, ಭರತ, ಶತ್ರುಘ್ನರಂತೆ ಎಂದು 7 ನೇ ಮಗಳು ಪದ್ಮಾವತಮ್ಮನಿಗೆ ಕಾಶಿ ಯಾತ್ರೆಯ ವೇಳೆ ಸಾಧು ಒಬ್ಬರು ತಿಳಿಸಿದರಂತೆ.
ಇದೆ ವೇಳೆ ನಿಮ್ಮ ಕುಟುಂಬಕ್ಕೆ ಕಂಟಕವಿದ್ದು ಮುಂದೆ ಅಭಿವೃದ್ಧಿ ಹೊಂದಲು ನಿಮ್ಮ ಈ ಐದು ಗ್ರಾಮಗಳಲ್ಲಿ ಐದು ಜನ ಸಹೋದರಿಯರು ವನವಾಸದಲ್ಲಿ ಪಾಂಡವರಂತೆ ಪ್ರತಿ ಪ್ರತಿದಿನ ಐದು ಮನೆಗಳಲ್ಲಿ 5 ದಿವಸ ಭಿಕ್ಷಾಟನೆ ಮಾಡಬೇಕು ನಂತರ ಸಹೋದರರ ಜೊತೆಗೂಡಿ ಭಿಕ್ಷೆ ಮಾಡಿದ ದವಸದಿಂದ ಅನ್ನ ಸಂತರ್ಪಣೆಯನ್ನು ಮಾಡಿ ಒಂಬತ್ತು ಹಸುಗಳನ್ನು ಮನೆ ದೇವರಿಗೆ ದಾನ ನೀಡಿದರೆ ಕುಟುಂಬಕ್ಕೆ ಅಂಟಿರುವ ಕಷ್ಟಗಳು ನಿವಾರಣೆಯಾಗಲಿವೆ ಎಂದು ಮಾರ್ಗದರ್ಶನ ಮಾಡಿದ್ದರು.
ಅದರಂತೆ 2022 ಕಾರ್ತಿಕ ಮಾಸದಲ್ಲಿ ಪಾವಗಡದ ಶನಿದೇವರಿಗೆ ಒಂದು ಹಸು ದಾನ ನೀಡಿದ್ದು ಇಂದು ಮಾಘಮಾಸದಲ್ಲಿ ಒಂಬತ್ತು ಹಸುಗಳನ್ನು ಮನೆದೇವರಾದ ಮೊಸರು ಪುಡಿ ಆಂಜನೇಯನಿಗೆ ದಾನ ನೀಡುವುದು ಕಾರ್ಯಕ್ರಮದ ಉದ್ದೇಶ ಹಾಗೂ ಕೊನೆಯದಾಗಿ ನಂದಿ ಬೆಟ್ಟದಲ್ಲಿರುವ ನಂದೀಶ್ವರನಿಗೆ ಒಂದು ಹಸುವನ್ನು ದಾನ ನೀಡಿ ಇಷ್ಟಾರ್ಥಸಿದ್ಧಿಗಾಗಿ ಪ್ರಾರ್ಥಿಸುವುದು. ಇಂತಹ ವ್ರತ ನಿಯಮಗಳನ್ನು ನಾವು ಪಾಲಿಸಲೇಬೇಕು ಇದು ನಮ್ಮ ಇಡೀ ಕುಟುಂಬಕ್ಕೆ ಶ್ರೇಯಸ್ಸನ್ನು ತರಲಿದೆ ಎಂದು ಸಹೋದರಿಯರಾದ ಪದ್ಮಾವತಮ್ಮ, ತಿಮ್ಮರಾಜಮ್ಮ ಹಾಗೂ ಎರಡನೇ ಸಹೋದರ ರಾಮಯ್ಯನವರು ತಿಳಿಸಿದ್ದಾರೆ.
ಇಂತಹ ಕಾರ್ಯಕ್ರಮಗಳು ಈಗಲೂ ನಡೆಯುತ್ತಿರುವುದು ಸನಾತನ ಧರ್ಮದ ಶಕ್ತಿಯನ್ನು ತೋರಿಸುತ್ತದೆ ದಂಪತಿಗಳಾದ ರಾಮಯ್ಯ ಹಾಗೂ ನಾರಾಯಣಮ್ಮ ನವರ ಒಂಬತ್ತು ಜನ ಮಕ್ಕಳಿಗೂ ಅವರ ಕುಟುಂಬಕ್ಕೂ ಒಳಿತಾಗಲಿ ಎಂದು ಇಡೀ ಗ್ರಾಮ ಪ್ರಾರ್ಥಿಸಿದ್ದು ಈ ಸಹೋದರ ಸಹೋದರಿಯರ ವ್ರತವು ಇಡೀ ಗ್ರಾಮದ ಅಭಿವೃದ್ಧಿ ಗಾಗಿ ಮಾಡುತ್ತಿದ್ದು ಇವರಿಗೂ ಶ್ರೇಯಸ್ ಆಗಲಿ ಎಂದು ಮುಖಂಡರು ಹಾರೈಸಿದ್ದಾರೆ. ಕಾರ್ಯಕ್ರಮದಲ್ಲಿ ನಾರಾಯಣ ನಮ್ಮ 9 ಮಕ್ಕಳು ಮೊಮ್ಮಕ್ಕಳು, ಮರಿ ಮಕ್ಕಳು ಸೇರಿದ್ದು ಕಾರ್ಯಕ್ರಮದಲ್ಲಿ ಇಡೀ ಗ್ರಾಮ ಜೊತೆಗಿತ್ತು.