ತುಮಕೂರು : ಮೀನು ಹಿಡಿಯಲು ಹೋದ ಯುವಕರಿಬ್ಬರು ಕಡಬ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಗುಬ್ಬಿ ತಾಲೂಕಿನ ಆಡುಗೊಂಡನಹಳ್ಳಿಯ ಹರೀಶ್(31), ಯೋಗೀಶ್ (36) ಮೃತ ದುರ್ದೈವಿಗಳು.
ಹರೀಶ್ ಹಾಗೂ ಯೋಗೀಶ್ ಜತೆಯಾಗಿ ಕಡಬ ಕೆರೆ ಸಮೀಪ ಹೋಗಿ. ಮೀನು ಹಿಡಿಯಲು ಕೆರೆಗೆ ಇಳಿದಿದ್ದಾರೆ. ಈ ವೇಳೆ ಕೆರೆಯಲ್ಲಿ ನೀರು ಹೆಚ್ಚಾಗಿದ್ದು ಮೇಲಕ್ಕೆ ಬರಲು ಆಗದೆ ಇಬ್ಬರು ಮುಳುಗಿ ಮೃತಪಟ್ಟಿದ್ದಾರೆ. ಮಕ್ಕಳಿಬ್ಬರು ರಾತ್ರಿ ಮನೆಗೆ ಬಾರದೆ ಇದ್ದಾಗ ಪೋಷಕರು ಹುಡುಕಾಡಿದ್ದಾರೆ. ಭಾನುವಾರ ಮುಂಜಾನೆ ಕೆರೆಯಲ್ಲಿ ಯುವಕರ ಮೃತದೇಹವು ಪತ್ತೆ ಆಗಿದೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳ ಸತತ ಪ್ರಯತ್ನದಿಂದಾಗಿ ಕೆರೆಯಲ್ಲಿ ಮುಳುಗಿದ್ದ ಎರಡು ದೇಹಗಳನ್ನು ಹೊರ ತರುವಲ್ಲಿ ಯಶಸ್ವಿಯಾಗಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಗುಬ್ಬಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.